ಹಾಸನ, ಆಗಸ್ಟ್ 22, 2025: ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಮ್ಮ ವಿರುದ್ಧ ಸಲ್ಲಿಕೆಯಾದ ಅಪೂರ್ಣ ಆಸ್ತಿ ವಿವರ ಆರೋಪ ಪ್ರಕರಣ ಕುರಿತು ಸ್ಪಷ್ಟನೆ ನೀಡಿದ್ದು, ವಕೀಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಸದರು, “ನಾನು ಅಭಿವೃದ್ಧಿಯ ಪರ, ಜನರ ಪರ ಕೆಲಸ ಮಾಡುತ್ತಿದ್ದೇನೆ. ಪ್ರತಿ ಮೂರು ದಿನಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಪ್ರಚಾರ ಮಾಡಿಕೊಳ್ಳುವುದಿಲ್ಲ. 2024ರ ಜುಲೈ 18ರಂದು ಹೈಕೋರ್ಟ್ನಲ್ಲಿ ಈ ಪ್ರಕರಣ ದಾಖಲಾಗಿತ್ತು, ಆದರೆ ಅದು ವಜಾಗೊಂಡಿತ್ತು. ಆಗ ‘ಗೆದ್ದೆ, ಗೆದ್ದೆ’ ಎಂದು ಪ್ರಚಾರ ಮಾಡಿಕೊಳ್ಳಬಹುದಿತ್ತು, ಆದರೆ ಮಾಡಿಲ್ಲ. ಈಗ ಅವರು ಸುಪ್ರೀಂ ಕೋರ್ಟ್ಗೆ ಅಪೀಲ್ ಸಲ್ಲಿಸಿದ್ದಾರೆ, ಅಷ್ಟೇ” ಎಂದು ತಿಳಿಸಿದರು.
ವಕೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶ್ರೇಯಸ್ ಪಟೇಲ್, “ನನ್ನ ಕಚೇರಿಗೆ ಯಾವುದೇ ನೋಟಿಸ್ ಬಂದಿಲ್ಲ. ಕೋರ್ಟ್ ಸಿಬ್ಬಂದಿ ಅಥವಾ ಅಮೀನರು ನೋಟಿಸ್ ನೀಡಬೇಕು. ಆದರೆ, ಮಾಧ್ಯಮದಲ್ಲಿ ಸುದ್ದಿಯಾಗಲೆಂದು ಕೆಲವು ವಕೀಲರು ಕ್ರಿಯೇಟ್ ಮಾಡಿದ್ದಾರೆ. ಇದು ಕಾನೂನುಬಾಹಿರ ಮತ್ತು ಅಸಂವಿಧಾನಿಕ. ವಕೀಲರು ತಮ್ಮ ವೃತ್ತಿಯ ನಿಯಮಗಳನ್ನು ತಿಳಿದುಕೊಳ್ಳಬೇಕು” ಎಂದು ಗರಂ ಆದರು.
ಕಾನೂನಿಗೆ ಶರಣಾಗುವುದೇ ತಮ್ಮ ಮಾರ್ಗವೆಂದು ತಿಳಿಸಿದ ಅವರು, “ನಾವೆಲ್ಲರೂ ಕಾನೂನಿಗೆ ತಲೆಬಾಗಬೇಕು. ಹೈಕೋರ್ಟ್ನಲ್ಲಿ ಈ ಪ್ರಕರಣಕ್ಕೆ ಹುರುಳಿಲ್ಲ ಎಂದು ವಜಾಗೊಂಡಿದೆ. ಈಗ ಸುಪ್ರೀಂ ಕೋರ್ಟ್ನಲ್ಲಿ ಅಪೀಲ್ ಸಲ್ಲಿಸಿದ್ದಾರೆ. ನನಗೂ ಕಾನೂನಾತ್ಮಕವಾಗಿ ಎದುರಿಸಲು ಹಲವು ದಾರಿಗಳಿದ್ದರೂ, ನಾನು ಕಾನೂನಿಗೆ ಶರಣಾಗುತ್ತೇನೆ. ತಪ್ಪು ಮಾಡಿದವರನ್ನು ಕೋರ್ಟ್ ನೋಡಿಕೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದರು.
ಅಭಿವೃದ್ಧಿಯೇ ತಮ್ಮ ಧ್ಯೇಯವೆಂದು ಸಂಸದರು ಹೇಳಿದ್ದಾರೆ. “ಜನರ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯ ಅಭಿವೃದ್ಧಿಯೇ ನನಗೆ ಮುಖ್ಯ. ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡುವುದು ಸರಿಯಲ್ಲ. ವಕೀಲರನ್ನೂ ನೇಮಿಸಿಕೊಂಡಿದ್ದೇವೆ, ಎಲ್ಲವನ್ನೂ ಕಾನೂನಿನ ಮೂಲಕವೇ ಎದುರಿಸುತ್ತೇವೆ” ಎಂದು ಶ್ರೇಯಸ್ ಪಟೇಲ್ ತಿಳಿಸಿದರು.
