
ಸಕಲೇಶಪುರ:ಮುಂದಿನ ಮೂರ್ನಾಲ್ಕು ತಿಂಗಳ ಒಳಗೆ ಹಾಸನದಿಂದ-ಮಾರನಹಳ್ಳಿವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂಪೂರ್ಣ ಮುಗಿಯಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಬಳಿಕ ಅವರು ಮಾತನಾಡಿದ ಅವರು, ಮುಂದಿನ ೨-೩ ತಿಂಗಳಲ್ಲಿ ಮಳೆಗಾಲ ಶುರುವಾಗಲಿದೆ. ಹಿಂದೆ ಎಲ್ಲೆಲ್ಲಿ ಭೂ ಕುಸಿತ ಉಂಟಾಗಿದ್ದ ಕಡೆಗಳಲ್ಲಿ ಏನೆಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಒಂದು ತಂಡವಾಗಿ ಪರಿಶೀಲನೆ ಮಾಡಿದ್ದೇವೆ. ಎಲ್ಲೆಲ್ಲಿ ಸಮಸ್ಯೆ ಇದೆ, ಪರಿಹಾರ ಏನು ಎಂಬುದರ ಬಗ್ಗೆ ಅವಲೋಕನ ಮಾಡಿದ್ದೇವೆ. ಬರುವ ಜೂನ್ ೩೦ ರೊಳಗೆ ಕಾಮಗಾರಿ ಮುಗಿಸುವ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೇ.100 ರಷ್ಟು ಭರವಸೆ ನೀಡಿದ್ದಾರೆ. ಹೆಚ್ಚೆಂದರೆ ಮತ್ತೊಂದು ತಿಂಗಳು ಮುಂದಕ್ಕೆ ಹೋಗಬಹುದು. ಒಟ್ಟಿನಲ್ಲಿ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಹೆದ್ದಾರಿ ಸಂಪೂರ್ಣ ಸಂಚಾರ ಮುಕ್ತವಾಗಲಿದೆ ಎಂದರು.
ಮುಖ್ಯವಾಗಿ ಮಳೆಗಾಲದಲ್ಲಿ ದೊಡ್ಡತಪ್ಪಲು ಸೇರಿದಂತೆ ಕೆಲವು ಕಡೆ, ಭೂ ಕುಸಿತ ತಡೆಯಲು ಒತ್ತು ನೀಡಿದ್ದೇವೆ. ಹಿಂದೆ ಭೂ ಸ್ವಾಧೀನ ಮಾಡಿದವರ ಅವೈಜ್ಞಾನಿಕ ಕ್ರಮ ಹಾಗೂ ತಪ್ಪಿನಿಂದಾಗಿ ನೇರವಾಗಿ ಗುಡ್ಡ ಕಡಿದಿರುವುದರಿಂದ ಕೆಲವೆಡೆ ಕುಸಿತಕ್ಕೆ ಕಾರಣವಾಗಿದೆ. ಇದನ್ನು ತಡೆಯಲು ಇಳಿಜಾರಾಗಿ ಗುಡ್ಡ ಕತ್ತರಿಸಲು ಮತ್ತಷ್ಟು ಭೂ ಸ್ವಾಧೀನ ಮಾಡಬೇಕಿದೆ. ಅದಕ್ಕೂ ಮುನ್ನ ಕಾಫಿಗಿಡ, ಮರಗಳಿಗೆ ಪರಿಹಾರ ಕೊಡಬೇಕಿದೆ. ಇನ್ನೂ ಎಷ್ಟು ಮೀಟರ್ ಭೂಮಿ ಬೇಕು ಎಂಬುದರ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ವರದಿ ಸಿದ್ದಪಡಿಸಲು ಸೂಚಿಸಿದ್ದೇನೆ .
ಈ ಮಾರ್ಗದಲ್ಲಿ ಆಗಬೇಕಿರುವ ಫ್ಲೈ ಓವರ್ ಕಾಮಗಾರಿಗೆ ಹಾಸನದ ಚನ್ನಪಟ್ಟಣ ಸರ್ಕಲ್, ರಾಜೀವ್ ಕಾಲೇಜು ಹಾಗೂ ಬಿಟ್ಟಗೋಡನಹಳ್ಳಿ ಬಳಿ ಕೊಂಚ ತಾಂತ್ರಿಕ ಸಮಸ್ಯೆ ಇದ್ದು, ಅದನ್ನು ಬಗೆಹರಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದ ಸಂಸದರು, ಅಣಚಿಹಳ್ಳಿ ಫ್ಲೈ ಓವರ್ ೧ ತಿಂಗಳಲ್ಲಿ, ಬೂವನಹಳ್ಳಿ ಬಳಿಯ ಫ್ಲೈ ಓವರ್ 3 ತಿಂಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ ಎಂದರು.
ಸಕಲೇಶಪುರ ಬಳಿಯ ದೋಣಿಗಾಲ್ ಕ್ರಾಸ್ನಲ್ಲಿ ಕಾಕ್ರಿಂಟ್ ರಸ್ತೆ ಮಾಡಲು ರಸ್ತೆ ಬಂದ್ ಮಾಡಲು ಕೇಳಿದ್ದಾರೆ. ಬಂದ್ ಮಾಡುವ ಮುಂಚೆ ವಾಹನ ಸವಾರರು, ಪ್ರಯಾಣಿಕರಿಗೆ ತಿಳಿಸಲಾಗುವುದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ನೆಟ್ ತಂತ್ರಜ್ಞಾನ ವ್ಯವಸ್ಥೆ ಇಲಾಖೆಯವರು ಒಂದು ಪ್ರಪೋಸಲ್ ರೆಡಿ ಮಾಡಿದ್ದಾರೆ. ಅದನ್ನು ಸಂಬಂಧಪಟ್ಟ ಮಂತ್ರಿ ಅವರಿಗೆ ಸಲ್ಲಿಸಿ 13 ಕೋಟಿ ಹಣ ಬಿಡುಗಡೆಗೆ ಮನವಿ ಮಾಡುವುದಾಗಿ ತಿಳಿಸಿದರು.