ಐಪಿಎಲ್ ಸೀಸನ್ 18 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ಸುಳಿಗೆ ಸಿಕ್ಕು ಒದ್ದಾಡುತ್ತಿದೆ. ಆರ್ಸಿಬಿ ವಿರುದ್ಧವೂ ಸೋತು ಅವಮಾನಕ್ಕೆ ಒಳಗಾಗಿದ್ದ ಸಿಎಸ್ಕೆಯಲ್ಲಿ ಸದ್ಯ ದೊಡ್ಡ ಬದಲಾವಣೆ ಮಾಡಲಾಗಿದೆ. ಮುಂದಿನ ಎಲ್ಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯಗಳಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಲಿದ್ದಾರೆ.
ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್ನಿಂದ ಹಾಲಿ ಕ್ಯಾಪ್ಟನ್ ಆಗಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ತಂಡದಿಂದ ಹೊರಗಿಡಲಾಗಿದೆ. ರುತುರಾಜ್ ಗಾಯಕ್ವಾಡ್ ಅವರು ಇಂಜುರಿಗೆ ಒಳಗಾಗಿದ್ದರಿಂದ ತಂಡದ ನಾಯಕತ್ವವನ್ನು ಮತ್ತೆ ಎಂ.ಎಸ್ ಧೋನಿಯ ಹೆಗಲೇರಿದೆ. ಚೆನ್ನೈ ತಂಡದ ಮುಂದಿನ ಎಲ್ಲ ಐಪಿಎಲ್ ಪಂದ್ಯಗಳಿಗೆ ಎಂ.ಎಸ್ ಧೋನಿಯೇ ಕ್ಯಾಪ್ಟನ್ ಆಗಿರಲಿದ್ದಾರೆ.
2025ರ ಐಪಿಎಲ್ ಟೂರ್ನಿಯಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ 5 ಪಂದ್ಯಗಳನ್ನು ಆಡಿರುವ ಚೆನ್ನೈ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಇದು ಅಲ್ಲದೇ 17 ವರ್ಷಗಳ ಬಳಿಕ ತವರಿನಲ್ಲಿ ಚೆನ್ನೈ ತಂಡ ಆರ್ಸಿಬಿ ವಿರುದ್ಧ ಸೋತಿರುವುದು ದೊಡ್ಡ ಮುಖಭಂಗವಾಗಿತ್ತು. ಪಾಯಿಂಟ್ ಪಟ್ಟಿಯಲ್ಲಿ ಕೆಳಗಡೆಯಿಂದ 2 ಸ್ಥಾನ ಅಂದರೆ 4 ಮ್ಯಾಚ್ ಸೋತು 9ನೇ ಸ್ಥಾನದಲ್ಲಿರುವ ಚೆನ್ನೈ ತಂಡವನ್ನು ಕ್ಯಾಪ್ಟನ್ ಆಗಿ ಎಂ.ಎಸ್ ಧೋನಿ ಮತ್ತೆ ಮೇಲೆತ್ತುತ್ತಾರಾ ಎಂದು ಮುಂದಿನ ಪಂದ್ಯಗಳಿಂದ ತಿಳಿದು ಬರಲಿದೆ.
