ರಾಮನಾಥಪುರ : ಜೀವನದಲ್ಲಿ ಹದತರುವ, ಮುದಕೊಡುವ ಸಂಗೀತಕಲೆ ಸದಾ ಜೀವಂತವಾಗಿರಲು ಸಂಗೀತಾರಾಧನೆ ನಿರಂತರವಾಗಿ ನಡೆಯಬೇಕು. ಅದಕ್ಕೆ ಶ್ರೋತೃಗಳು, ಬಂಧುಗಳು, ಮಿತ್ರರು ಮತ್ತು ಸಂಗೀತಾಭಿಮಾನಿಗಳ ಹೃದಯ ವೈಶಾಲ್ಯವೇ ಪ್ರಮುಖ ಕಾರಣವಾಗಿದೆ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿ ಸದಸ್ಯರಾದ ವೇ. ಶ್ರೀಮತಿ ಲಕ್ಷ್ಮಿಕಾಶಿ ತಿಳಿಸಿದರು.
ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ 9ನೇ ದಿವಸದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಡಾ. ಎನ್.ಜೆ. ನಂದಿನಿ ಅವರ ಹಾಡುಗಾರಿಕೆ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.
ಹೃದಯವಂತರಾದ ಸಂಗೀತಾಭಿಮಾನಿಗಳ ಸೌಜನ್ಯ, ಔದಾರ್ಯ ಮತ್ತು ಪ್ರೋತ್ಸಾಹದಿಂದ ಸಂಗೀತದ ದೇವಗಂಗೆಯೇ ಮನೆಬಾಗಿಲಿಗೆ ಹರಿದುಬಂದಂತಾಗಿದೆ. ಇಂತಹ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಿರಂತರವಾಗಿ ನಡೆಯಲು ನೂರಾರು ಸಂಗೀತಾಸಕ್ತರು ನೀಡುತ್ತಿರುವ ಆರ್ಥಿಕ ಸಹಕಾರ ಮತ್ತು ಸಹೃದಯತೆ ಅಪೂರ್ವವಾಗಿದೆ. ಈ ಸಹಕಾರಕ್ಕೆ ಎಲ್ಲರಿಗೂ ಅನಂತ ಕೃತಜ್ಞತೆಗಳು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿದುಷಿ ಡಾ. ಎನ್.ಜೆ. ನಂದಿನಿ ಅವರು ತಮ್ಮ ಮನೋಜ್ಞ ಹಾಡುಗಾರಿಕೆಯಿಂದ ಸಂಗೀತಾಭಿಮಾನಿಗಳಿಗೆ ರಸದೌತಣ ನೀಡಿದರು.
ಈ ಸಂದರ್ಭದಲ್ಲಿ ಇಂದಿನ ಸೇವಾಕರ್ತರಾದ ಮಲ್ಲರಾಜಪಟ್ಟಣದ ದಿ. ರಾಮಸ್ವಾಮಿ ಅಯ್ಯಂಗಾರ್ ಅವರ ಮಕ್ಕಳು ಎಂ.ಆರ್. ಶ್ರೀನಿವಾಸ ಅಯ್ಯಂಗಾರ್ ಮತ್ತು ಸಹೋದರರು, ಸಿದ್ದಾಪುರದ ಶ್ರೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ, ಶ್ರೀಲಕ್ಷ್ಮೀ ಮೈಸೂರು ಹಾಗೂ ದಿ. ಎಂ.ಜೆ. ರಾಮಕೃಷ್ಣ ಅಯ್ಯಂಗಾರ್ ಅವರ ಮಕ್ಕಳು ಎಂ.ಆರ್. ರಾಮಭದ್ರನ್ (ಮೈಸೂರು) ಅವರು ಕಾರ್ಯಕ್ರಮ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದರು.
ದೇವಾಲಯದ ಮುಖ್ಯ ಅರ್ಚಕರಾದ ವೇ. ಶ್ರೀನಿವಾಸ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.
– ಕುಮಾರಸ್ವಾಮಿ ಎಂ.ಎನ್.
