ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣ ಆಗಿರಲೇಬೇಕು.
ಹೌದು, ಕಾನ್ಸ್ಟೇಬಲ್ ಹುದ್ದೆಗೆ ಪ್ರಸ್ತುತ ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಎಂದು ಇದೆ. ಇನ್ಮುಂದೆ ಆ ಕನಿಷ್ಠ ವಿದ್ಯಾರ್ಹತೆಯನ್ನು ದ್ವಿತೀಯ ಪಿಯುಸಿಗೆ ಸೀಮಿತಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಎಚ್.ಕೆ. ಪಾಟೀಲ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಮತ್ತು ಭಾರತೀಯ ಮೀಸಲು ಪಡೆಯ (ಐಆರ್ಬಿ) ಕರಡು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸಬೇಕು. ಕರಡು ನಿಯಮಗಳಿಗೆ ಸ್ವೀಕೃತವಾಗುವ ಆಕ್ಷೇಪಣೆಗಳು ಗುರುತರವಾಗಿಲ್ಲದಿದ್ದಲ್ಲಿ, ಮತ್ತೊಮ್ಮೆ ಸಂಪುಟದ ಅನುಮೋದನೆ ಪಡೆಯದೆ ಅಂತಿಮಗೊಳಿಸಿ ಪ್ರಕಟಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
