ಬೆಂಗಳೂರು : ಮಾನಸಿಕ ಅಸ್ವಸ್ಥೆ ಪತ್ನಿಯಿಂದ ಭೀಕರವಾಗಿ ಹತ್ಯೆಗೀಡಾಗಿರುವ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಅವರ ಶವದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಇದೇ ವೇಳೆ ಓಂ ಪ್ರಕಾಶ್ ಪತ್ನಿ ಪಲ್ಲವಿ ಪೊಲೀಸ್ ಆಫೀಸರ್ಸ್ ಅಸೋಷಿಯೇಷನ್ ಗ್ರೂಪ್ ಗೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿದ್ದ ಸಂಗತಿ ಬೆಳಕಿಗೆ ಬಂದಿದೆ.
ನನ್ನ ಗಂಡನಿಗೆ ಮಸ್ತಾನ್ ಎಂಬ ಭಯೋತ್ಪಾದಕ ಸೇರಿದಂತೆ ಹಲವು ಉಗ್ರಗಾಮಿಗಳೊಂದಿಗೆ ಸಂಪರ್ಕ ಇದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದ ಪಲ್ಲವಿ, ಈ ಪ್ರಕರಣದ ಮುಂದೆ ರನ್ಯಾ ರಾವ್ ಪ್ರಕರಣ ಏನೂ ಅಲ್ಲ ಎಂದು ವಾಟ್ಸಪ್ ಸಂದೇಶದಲ್ಲಿ ಹೇಳಿದ್ದರು.
ಈ ಕೂಡಲೇ ಓಂ ಪ್ರಕಾಶ್ ರಿವಾಲ್ವರ್ ವಶಪಡಿಸಿಕೊಳ್ಳಬೇಕು. ನಮ್ಮ ಮೊಬೈಲ್ ಹ್ಯಾಕ್ ಮಾಡುವ ಮುನ್ನ ಈ ಸಂದೇಶವನ್ನು ಹಂಚಬೇಕು. ನನ್ನ ಸುತ್ತಲೂ ಅವರು ಏಜೆಂಟ್ಗಳನ್ನು ಬಿಟ್ಟಿದ್ದು, ನಾನೆಲ್ಲೇ ಹೋದರೂ ಅವರ ಕಣ್ಗಾವಲಿನಲ್ಲಿಯೇ ಇರಬೇಕಾಗಿದೆ. ನನಗೆ ಜೀವ ಬೆದರಿಕೆ ಇದ್ದು ಕೇಂದ್ರ ಸರ್ಕಾರ ಓಂ ಪ್ರಕಾಶ್ ಮೇಲೆ ಕ್ರಮ ಕೈಗೊಳಗ್ಳಬೇಕೆಂದು ಪಲ್ಲವಿ ಮೆಸೇಜ್ ನಲ್ಲಿ ಹೇಳಿಕೊಂಡಿದ್ದರು.
