ಮೈಸೂರು : ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ದಲಿತರಿಗೆ ಮೋಸ ಮಾಡಿ ದಲಿತರ ಮೀಸಲು ನಿಧಿಗೆ ಕನ್ನ ಹಾಕಿ ಹಗಲು ದರೋಡೆ ಮಾಡುತ್ತಿದೆ ಎಂದು ಮೈಸೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ತೊಟ್ಟವಾಡಿ ಅನಿಲ್ ಕುಮಾರ್ ಗಂಭೀರವಾಗಿ ಆರೋಪ ಮಾಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸತತ 3 ವರ್ಷಗಳ ಕಾಲ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕಾಗಿ SCSP -TSP ಯ 39 ಸಾವಿರ ಕೋಟಿ ರೂ ದುರುಪಯೋಗ ಮಾಡಿಕೊಂಡಿದೆ. ಇದೀಗ ಮತ್ತೊಂದು ಬಜೆಟ್ ಮಂಡನೆ ಹೆಸರಿನಲ್ಲಿ ಸಿದ್ದರಾಮಯ್ಯನವರು ಮತ್ತೆ 15 ಸಾವಿರ ಕೋಟಿ ರೂ. ಗಳನ್ನು ಮುಳುಗಿಸಲು ಸಜ್ಜಾಗಿದ್ದಾರೆ. ‘7D’ ಕಾಯ್ದೆಯನ್ನು ಕಿತ್ತು ಹಾಕಿ SCSP-TSP ಕಾಯ್ದೆಯನ್ನು ಬಲಪಡಿಸಿದ್ದೆ ನಾವು ಎಂದು ಬೆನ್ನು ತಟ್ಟಿಕೊಳ್ಳುವ ಸಿದ್ದರಾಮಯ್ಯ ಒಳಗೊಳಗೆ ‘7C” ಮೂಲಕ ದಲಿತರ ಮೀಸಲು ನಿಧಿಗೆ ಕನ್ನ ಹಾಕುತ್ತಿದೆ ಎಂದರು.
SCSP-TSP ಯೋಜನೆಯ ಮೂಲ ಉದ್ದೇಶ ಪ್ರತಿ ಇಲಾಖೆಯು ತನ್ನ ಬಜೆಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ (ಕರ್ನಾಟಕದಲ್ಲಿ 24.1%) ಹಣ ತೆಗೆದಿರಿಸಿ SC, ST, ಸಮುದಾಯಗಳಿಗೆ ಬಳಸಬೇಕು.ಅದಕ್ಕಾಗಿ ಪ್ರತಿ ಇಲಾಖೆಯೂ ಉಪಯೋಜನೆ ರೂಪಿಸಬೇಕು.ದಲಿತರ,ಆದಿವಾಸಿಗಳ ಸಬಲೀಕರಣ,ದಲಿತ ಕೇರಿ, ಕಾಲೋನಿ, ಹಾಡಿಗಳಿಗೆ ಮೂಲಭೂತ ಸೌಲಭ್ಯ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಸತಿ ಸ್ವಾವಲಂಬನೆಗೆ ಒತ್ತು ನೀಡಬೇಕು.ಆದರೆ ಆಗುತ್ತಿರುವುದೇನು ? ಎಂದು ಪ್ರಶ್ನೆ ಮಾಡಿದರು.
ಗ್ಯಾರೆಂಟಿ ಯೋಜನೆ ಇಲಾಖೆಗಳ ಉಪಯೋಜನೆಯೇ? ಅಲ್ಲ! ಪಕ್ಷದ ಚುನಾವಣಾ ಪ್ರಣಾಳಿಕೆ ಜಾರಿಗೆ ತರುವ ಸರ್ಕಾರದ ಮುಖ್ಯ ಯೋಜನೆ. ಹೀಗಾಗಿ ದಲಿತರ ಮೀಸಲು ನಿಧಿಯನ್ನು ಗ್ಯಾರೆಂಟಿ ಯೋಜನೆಗೆ ಬಳಸಿದ್ದು ಪರಮ ಅನ್ಯಾಯ .ಗ್ಯಾರೆಂಟಿ ಯೋಜನೆ SCSP – TSP ಯೋಜನೆಯ ಮೂಲ ಉದ್ದೇಶವನ್ನು ಪೂರೈಸುವುದಿಲ್ಲ .
ಗ್ಯಾರೆಂಟಿ ಯೋಜನೆ SC, ST ಸಮುದಾಯಗಳಿಗೆ ಮಾತ್ರ ಇಲ್ಲ.ಎಲ್ಲರಿಗೂ ಅಂದರೆ ಹಿಂದುಳಿದವರು,ಸವರ್ಣೀಯರು, ಸರ್ಕಾರಿ ನೌಕರರು ಎಲ್ಲರನ್ನು ಗ್ಯಾರೆಂಟಿ ಯೋಜನೆ ಒಳಗೊಳ್ಳುತ್ತದೆ .
2023 ರ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯನವರು’ ಮಹದೇವಪ್ಪ ನಿಂಗೂ ಫ್ರೀ, ಕಾಕಾಪಾಟೀಲ ನಿಂಗೂ ಫ್ರೀ! ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡ್ತಿಗೂ ಫ್ರೀ’ ಎಂದು ಹೇಳಿದ್ದು ವ್ಯಾಪಕ ಪ್ರಚಾರ ಪಡೆದಿತ್ತು.ಆದರೆ ಆದದ್ದು ಏನು?ಕಾಕಾಪಾಟೀಲರಿಗೆ ಖಜಾನೆ ಹಣದಿಂದ ಗ್ಯಾರೆಂಟಿ ಕೊಡಲಾಯಿತು. ಪಾಪಾ ಅದೇ ಮಹದೇವಪ್ಪನವರಿಗೆ SCSP ಹಣದಿಂದ ಗ್ಯಾರೆಂಟಿ ಕೊಟ್ಟಿದ್ದು ಸರಿಯೇ? ಇದು ಸಾಮಾಜಿಕ ನ್ಯಾಯವೇ? ಮುಸ್ಲಿಮರಿಗೆ ಗ್ಯಾರೆಂಟಿ ಸೌಲಭ್ಯ ಕೊಡಲು ಅಲ್ಪ ಸಂಖ್ಯಾತರ ಕಲ್ಯಾಣ ನಿಧಿ ಹಣವನ್ನು ಮುಟ್ಟುವುದಿಲ್ಲ. ಖಜಾನೆಯಿಂದಲೇ ಹಣ ಕೊಡುತ್ತೀರಿ. ಅದೇ ದಲಿತರಿಗೆ. ಆದಿವಾಸಿಗಳಿಗೆ ‘ದಲಿತರ ಮೀಸಲು ನಿಧಿ’ ಯ ಹಣ ಕತ್ತರಿಸುವುದು ಯಾವ ನ್ಯಾಯ !? ಸ್ವಾಮಿ ಎಂದರು.
ದಲಿತರ ಮೀಸಲು ನಿಧಿಯನ್ನು ಮುಳುಗಿಸಿದ ನಂತರವಾದರು ಗ್ಯಾರೆಂಟಿ ಯೋಜನೆಗಳು ಸರಿಯಾದ ‘ಹಳಿ’ ಗಳ ಮೇಲೆ ಹೋಗುತ್ತಿದೆಯೇ? ಮೂರು, ಐದು ತಿಂಗಳಾದರೂ ಹಣ ಬಿಡುಗಡೆಯಾಗುವುದಿಲ್ಲ. ಚುನಾವಣೆ, ಉಪಚುನಾವಣೆಗೆ ಕಾದು ಕಾಸು ಬಿಡುಗಡೆ ಮಾಡುತ್ತೀರಾ?ಇಂತಹ ಕೊಳಕು ರಾಜಕೀಯ ಬೇಕಾ ಸ್ವಾಮಿ.
2023-24 ನೇ ಸಾಲಿನಲ್ಲಿ 11.144/- 3 ರೂ,2024-25 14.282/- ಕೋಟಿ ರೂ.,2025-26 ನೇ ಸಾಲಿನಲ್ಲಿ13,433/-0.ರೂ.ಒಟ್ಟು3 ವರ್ಷದ ಬಾಯ್ತು 38.859/- ರೂಗಳಾಗಿದೆ.
2025-26 ರಲ್ಲಿ SCSP/TSPಗೆ ಬಜೆಟ್ಟಿನಲ್ಲಿ ನಿಗದಿಯಾದದ್ದು- 42.018/- ಕೋಟಿ ರೂ. ಆದರೆ ಈ ವರ್ಷ(2026) ಫೆ.16 ರವರೆಗೆ ಬಳಕೆಯಾದದ್ದು 23,788 ಕೋ ರೂ ಮಾತ್ರ. ಇದರಲ್ಲಿ ಗ್ಯಾರೆಂಟಿ ಬಾಬು 13,443/- ಕೋಟಿ ರೂ. ಅಂದರೆ ಈ ವರ್ಷ SCSP – TSP ಗೆ ಖರ್ಚಾಗಿರುವುದು 10.345 ಕೋಟಿ ರೂ ಮಾತ್ರ. ಇನ್ನೂ 18,230/- ಕೋಟಿ ರೂ ಖರ್ಚಾಗದೇ ಉಳಿದಿದೆ. ಈ ಅನ್ಯಾಯಕ್ಕೆ ‘7D’ ಅನ್ವಯ ಯಾರನ್ನು ಶಿಕ್ಷಿಸಬೇಕು ? ಉತ್ತರಿಸಿ ಮುಖ್ಯಮಂತ್ರಿಗಳೇ ಎಂದರು.
ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ,ಆದಿಜಾಂಬವ ಅಭಿವೃದ್ಧಿ ನಿಗಮ,ವಾಲ್ಮೀಕಿ ಅಭಿವೃದ್ಧಿ ನಿಗಮ,ತಾಂಡಾ ಅಭಿವೃದ್ಧಿ ನಿಗಮ,ಲಿಡ್ಕರ್,ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ,ಅಲೆಮಾರಿ,ಅರೆಅಲೆಮಾರಿ,ಅತಿ ಸೂಕ್ಷ್ಮಜಾತಿಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನವಿಲ್ಲದೆ ಸೊರಗಿ ಕುಳಿತಿವೆ.42 ಸಾವಿರ ಕೋ ರೂ ದಲಿತರ ಮೀಸಲು ನಿಧಿಯಲ್ಲಿ ಈ ನಿಗಮಗಳಿಗೆ ಕೊಟ್ಟ ಹಣ ಎಷ್ಟು ?
ಗಂಗಾ ಕಲ್ಯಾಣ,ಐರಾವತ ವಾಹನ ಯೋಜನೆ,ಭೂ ಒಡೆತನ,ವಿದ್ಯಾರ್ಥಿಗಳ ಸ್ಕಾಲರ್ ಶಿಪ್,ವಿದೇಶಗಳಲ್ಲಿ ಉನ್ನತ ವ್ಯಾಸಾಂಗ,ವಸತಿ ಶಾಲೆಗಳು,ಹಾಸ್ಟೆಲ್ ಕಟ್ಟಡಗಳು ನೆಲಕಚ್ಚಿ ನಿಂತಿವೆ.ಈ ಯೋಜನೆಗಳಿಗೆ ಪ್ರತಿ ಶಾಸಕರಿಗೆ ಎಷ್ಟು ಹಣ ಸಿಕ್ಕಿದೆ ?ಬಾಯಿಬಿಡಿ ಕಾಂಗ್ರೆಸ್ಸಿನ ದಲಿತ ಶಾಸಕರೇ ?
ರಾಜ್ಯದೆಲ್ಲೆಡೆ ದಲಿತರು ಬೀದಿಗಿಳಿದಿದ್ದಾರೆ.ಹೋರಾಟ ಮಾಡಿದ್ದಾರೆ.ಆದರೆ ಸಿದ್ಧರಾಮಯ್ಯ ಸರ್ಕಾರ ಮತ್ತೆ ಅದೇ ಚಾಳಿ ಮುಂದುವರಿಸುತ್ತಿದೆ ಇದರ ಪ್ರತಿಫಲ ತಾವು ಉಣ್ಣಲೇ ಬೇಕು ಕಾಯ್ದು ನೋಡಿ ಎಂದರು.
ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾದ ಎಂ. ಪರಮಾನಂದ, ಕಾಂಪೋಸ್ಟ್ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್. ಮಹಾದೇವಯ್ಯ , ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಡಾಕ್ಟರ್ ಪ್ರಪುಲ್ಲಾ ಮಲ್ಲಾಡಿ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಡಾ. ಶಿವರಾಂ, ಜಿಲ್ಲಾ ಕಾರ್ಯದರ್ಶಿ ಸಿ ಎಂ ಮಹದೇವಯ್ಯ, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬನ್ನಾರಿ, ವರುಣ ಮಂಡಲ ಮಾಜಿ ಅಧ್ಯಕ್ಷರಾದ ಅಳಗಂಚಿ ಶಿವಯ್ಯ, ಎಚ್. ಡಿ ಕೋಟೆ ಮಂಡಲ ಪ್ರಧಾನ ಕಾರ್ಯದರ್ಶಿ ರಾಜು, ರಂಗಸಮುದ್ರ ಆನಂದ್, ಎಸ್ ಟಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ್, ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾಗೇಂದ್ರ ಉಪಸ್ಥಿತರಿದ್ದರು.
ವರದಿ : ಎಂ ನಾಗೇಂದ್ರ ಕುಮಾರ್
