ಮೈಸೂರು: ಅಳಿವಿನ ಅಂಚಿನಲ್ಲಿರುವ ಅಪರೂಪದ ವನ್ಯಜೀವಿ ಪ್ರಭೇದವಾದ ಸಿಂಹಬಾಲದ ಸಿಂಗಳೀಕ (Lion-tailed Macaque) ಜೋಡಿಯು ಮೈಸೂರಿನ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಮರಿಯೊಂದಕ್ಕೆ ಜನ್ಮ ನೀಡಿದ್ದು, ಈ ಕುಟುಂಬದ ಸದಸ್ಯರ ಸಂಖ್ಯೆ ಇದೀಗ ನಾಲ್ಕಕ್ಕೆ ಏರಿದೆ.
ದೇಶದ ಅಪಾಯದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ, ಕೇಂದ್ರೀಯ ಮೃಗಾಲಯ ಪ್ರಾಧಿಕಾರವು ‘ತಳಿ ಅಭಿವೃದ್ಧಿ ಯೋಜನೆ (Species Breeding Programme)’ ರೂಪಿಸಿದೆ. ಅದರಂತೆ, ಸಿಂಹಬಾಲದ ಸಿಂಗಳೀಕಗಳ ಅಭಿವೃದ್ಧಿ ಜವಾಬ್ದಾರಿ ಮೈಸೂರು ಮೃಗಾಲಯಕ್ಕೆ ನೀಡಲಾಗಿದೆ.
ಇದನ್ನು ಓದಿ: ಭಾರತದ ಏಕೈಕ ಮಣ್ಣಿನ ಜ್ವಾಲಾಮುಖಿ: ಅಂಡಮಾನ್–ನಿಕೋಬಾರ್ನಲ್ಲಿ ಬರಾಟಾಂಗ್
ಈ ಯೋಜನೆಯಡಿ 2015ರಿಂದಲೇ ಈ ಪ್ರಭೇದದ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಪ್ರಯತ್ನಗಳು ನಡೆಯುತ್ತಿದ್ದು, ಕಳೆದ ವರ್ಷದಿಂದ ಯಶಸ್ಸಿನ ಹಾದಿಯಲ್ಲಿದೆ. ಇದೀಗ ಹೊಸ ಮರಿ ಜನ್ಮದಿಂದ ಯೋಜನೆಗೆ ಮತ್ತೊಂದು ಉತ್ಸಾಹ ತುಂಬಿದೆ.
ವೈಜ್ಞಾನಿಕರು ಮತ್ತು ವನ್ಯಜೀವಿ ತಜ್ಞರ ಪ್ರಕಾರ, ಸಿಂಹಬಾಲದ ಸಿಂಗಳೀಕವು ಪಶ್ಚಿಮಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾದ ಅಪರೂಪದ ಪ್ರಭೇದ, ಮತ್ತು ಇದರ ಜನಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಯಶಸ್ಸು ಪ್ರಕೃತಿ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
