ಮೈಸೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಹೊರರಾಜ್ಯ ವಲಸಿಗರಿಗೆ ಸರ್ಕಾರ ನೀಡುತ್ತಿರುವ ಅನಗತ್ಯ ಸೌಲಭ್ಯಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಮೈಸೂರಿನ ಅಕ್ಕನ ಬಳಗದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊರರಾಜ್ಯ ವಲಸಿಗರು ಆಟೋ, ಕಾರು ಚಾಲನೆ, ಹೋಟೆಲ್ ಉದ್ಯಮ, ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಕ್ಷೇತ್ರ, ಭದ್ರತಾ ಸಂಸ್ಥೆಗಳು ಹಾಗೂ ಬೀದಿ ವ್ಯಾಪಾರಗಳಲ್ಲಿ ಹೆಚ್ಚಾಗಿ ಪ್ರವೇಶ ಪಡೆದುಕೊಂಡಿದ್ದು, ಇದರಿಂದ ಸ್ಥಳೀಯ ಕನ್ನಡಿಗರು ಉದ್ಯೋಗವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಈ ಗಂಭೀರ ಸಮಸ್ಯೆಯನ್ನು ಗಮನಿಸುವ ಬದಲು, ಅನಧಿಕೃತ ವಲಸಿಗರಿಗೆ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕನ್ನಡಿಗರ ಮೇಲೆ ನಡೆಯುತ್ತಿರುವ ಸ್ಪಷ್ಟ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕನ್ನಡಿಗರಿಗೆ ನ್ಯಾಯ ಸಿಗುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.

ಡಿಸೆಂಬರ್ 28ರಂದು ನಡೆದ ಕನ್ನಡಿಗರ ಒಗ್ಗಟ್ಟು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು “ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ” ಎಂದು ಘೋಷಿಸಿದ್ದನ್ನು ನೆನಪಿಸಿದ ಮುಖಂಡರು, ಅದಾದ ಬಳಿಕವೇ ಬೆಂಗಳೂರಿನ ಕೋವಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರಿಗೆ ಮನೆ ಹಂಚಿಕೆ ಮಾಡುವ ನಿರ್ಧಾರ ಪ್ರಕಟವಾದುದು ಸರ್ಕಾರದ ನಿಲುವಿನ ಬಗ್ಗೆ ಅನುಮಾನ ಹುಟ್ಟಿಸಿದೆ ಎಂದು ಹೇಳಿದರು.
ಇದನ್ನು ಓದಿ: ಬೆಂಗಳೂರು: ಟಾಟಾ ಮುಂಬೈ ಮ್ಯಾರಥಾನ್ನ 21 ನೇ ಆವೃತ್ತಿಗೆ ರಾಯಭಾರಿಯಾದ ಆಂಡ್ರೆ ಡಿ ಗ್ರಾಸ್!
ಇದಲ್ಲದೆ, ಕೃಷ್ಣ ಮೇಲ್ದಂಡೆ ಯೋಜನೆಯಡಿ ಉತ್ತರ ಕರ್ನಾಟಕದ ರೈತರ ಜಮೀನು ಪಡೆದುಕೊಂಡು ಸಮರ್ಪಕ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿರುವುದರಿಂದ ಅನೇಕ ಕನ್ನಡಿಗ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನೋವುಗಳು ಸರ್ಕಾರಕ್ಕೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಅವರು ಅರಮನೆ ಮೈದಾನದಲ್ಲಿ ನೀಡಿದ ಭರವಸೆಯನ್ನು ಮಾತಿನಲ್ಲೇ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದ ಅವರು, ತಕ್ಷಣವೇ ಸಚಿವ ಸಂಪುಟ ಸಭೆ ಕರೆದು ಡಾ. ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ, ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದು ಕೇವಲ ಒಂದು ಸಂಘಟನೆಯ ಬೇಡಿಕೆ ಅಲ್ಲ; ಸಮಸ್ತ ಕನ್ನಡಪರ ಹೋರಾಟಗಾರರು ಹಾಗೂ ಕನ್ನಡಿಗರ ಧ್ವನಿಯಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿತು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಿರೀಶ್ ಶಿವಾಚಾರ್ಯ, ರಾಜ್ಯ ಕಾರ್ಯದರ್ಶಿ ಪ್ರಕಾಶ್, ಗೌರವಾಧ್ಯಕ್ಷ ಕುಮಾರ್ ರಾಜೇ ಅರಸ್, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್ ಹಾಗೂ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಸಚಿನ್ ದೀಕ್ಷಿತ್ ಉಪಸ್ಥಿತರಿದ್ದರು.
