ರಾಮನಾಥಪುರ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಪೌರಾಣಿಕ ನಾಟಕಗಳು ಮನುಷ್ಯನ ಮನಸ್ಸಿಗೆ ಉತ್ತಮ ಬದುಕಿನ ಮಾರ್ಗದರ್ಶನ ನೀಡುತ್ತವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಹೇಳಿದರು.
ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಕೊಪ್ಪಲು ಗ್ರಾಮದಲ್ಲಿ ದಯಾನಂದ ನಿರ್ಮಿಸಿರುವ ಶ್ರೀ ಶಾಂತಮಲ್ಲಿಕಾರ್ಜುನ ಡ್ರಾಮಾ ಸೀನ್ಸ್ ರಂಗಮಂಟಪದಲ್ಲಿ ಆಯೋಜಿಸಿದ್ದ “ಶ್ರೀ ಶನಿಪ್ರಭಾವ ಅಥವಾ ರಾಜಾ ವಿಕ್ರಮ” ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳಲ್ಲಿ ಬರುವ ವಿವಿಧ ಪಾತ್ರಗಳಲ್ಲಿನ ಉತ್ತಮ ಸಂದೇಶಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವ ಉತ್ತಮ ಬದುಕು ನಡೆಸಲು ಸಾಧ್ಯವೆಂದು ಹೇಳಿದರು. ಪೌರಾಣಿಕ ನಾಟಕಗಳು ಸಾಂಸ್ಕೃತಿಕ ಕಾರ್ಯಕ್ರಮಗಳಾಗಿದ್ದು, ಗ್ರಾಮೀಣ ಜನರಲ್ಲಿ ಸಮಾಜ ಪರಿವರ್ತನೆಗೆ ಕಾರಣವಾಗುತ್ತಿವೆ. ಇಂದಿನ ವಾಟ್ಸಾಪ್ ಹಾವಳಿಯ ನಡುವೆಯೂ ಇಂತಹ ನಾಟಕಗಳು ಜನಸಾಮಾನ್ಯರಿಗೆ ರಾತ್ರಿಯಿಡೀ ಮನರಂಜನೆ ನೀಡುತ್ತಾ ಜನ ಮೆಚ್ಚುಗೆ ಗಳಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಪೌರಾಣಿಕ ನಾಟಕಗಳ ಪರಂಪರೆ ಇನ್ನಷ್ಟು ಗಟ್ಟಿಯಾಗಬೇಕು ಹಾಗೂ ಯುವ ಪೀಳಿಗೆಯೂ ಇದರಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅರ್ಚಕರಾದ ಶ್ರೀ ನಾಗರಾಜಸ್ವಾಮಿ, ಸಾಹಿತಿ ಜಮೀರ್ ಅಹಮ್ಮದ್, ಜಿ.ಸಿ. ಮಂಜೇಗೌಡ, ಕುಮಾರಸ್ವಾಮಿ, ಪುಪ್ಯಹರೀಶ್, ಸಿದ್ದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ- ಕುಮಾರಸ್ವಾಮಿ
