ತುಮಕೂರು:ಸರಕಾರದ ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಔಟರ್ರಿಂಗ್ರಸ್ತೆಯ ಡಿಪಿಆರ್, ಸಂಪೂರ್ಣ ರೈತವಿರೋಧಿ,ಜನವಿರೋಧಿಯಾಗಿದ್ದು,ಸರಕಾರ ದಬ್ಬಾಳಿಕೆ,ದೌರ್ಜನ್ಯದ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದು,ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಯಾರಿಸಿರುವ ವಿಸ್ಕೃತ ಯೋಜನಾ ವರದಿ (ಡಿಪಿಆರ್) ಸಂಪೂರ್ಣ ರೈತ ವಿರೋಧಿ, ಜನವಿರೋಧಿಯಾಗಿದೆ.ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಭೂ ಮಾಫಿಯ ಕಪಿಮುಷ್ಠಿಗೆ ಸಿಲುಕಿ ರಿಂಗ್ರಸ್ತೆ ಬದಲು, ಜಿಗ್ಜಾಗ್ರಸ್ತೆ ಅಲೈನ್ ಮಾಡಿದ್ದು, ಓರ್ವ ರೈತನ ಮಗನಾಗಿ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸದೆ, ರಾಜಕೀಯ ರಹಿತವಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಈ ಹೋರಾಟದಿಂದ ನನ್ನ ರಾಜಕೀಯಜೀವನಕ್ಕೆ ಕುಂದುಂಟಾದರೂ ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ಸರಕಾರದ ಪ್ರಸ್ತಾಪಿತ ಔಟರ್ರಿಂಗ್ರಸ್ತೆ ಹಾದು ಹೋಗುವ ಜಾಗದ ಸುಮಾರು 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ, 700 ಎಕರೆಗೂ ಹೆಚ್ಚು ಪ್ರದೇಶ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ.ಸರಕಾರದ ಅಧಿಕಾರಿಗಳ ಪ್ರಕಾರ,ಈ ಪ್ರದೇಶ ಶೇ70ರಷ್ಟು ಒಣಭೂಮಿ ಎಂದು ಡಿಪಿಆರ್ನಲ್ಲಿ ಉಲ್ಲೇಖಿಸಲಾಗಿದೆ.ಆದರೆ ವಾಸ್ತವದಲ್ಲಿ ಶೇ80ರಷ್ಟು ಜಾಗದಲ್ಲಿ ತೆಂಗು, ಅಡಿಕೆ, ಮಾವು, ಸಪೋಟ, ಸೀಬೆ, ಬಟರ್ ಪ್ರೂಟ್ ಸೇರಿದಂತೆ ಹಲವು ಜಾತಿಯ ಹಣ್ಣಿನ ಗಿಡಗಳನ್ನು ಹೊಂದಿದ ನೀರಾವರಿ ಪ್ರದೇಶವಿದೆ.ಡಿಪಿಆರ್ ಸಿದ್ಧವಾಗಿ ವರ್ಷಗಳೇ ಕಳೆದರೂ, ಸಂತ್ರಸ್ಥ ರೈತರಿಗೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದ ಮೇಲೆ ಭೂಮಿ ಕಳೆದುಕೊಳ್ಳುವ ರೈತರಿಗೆ ಡಿಪಿಆರ್ ನೀಡಲಾಗಿದೆ.ಜನರನ್ನು ಇಷ್ಟು ಕತ್ತಲಲ್ಲಿ ಇಟ್ಟುರಸ್ತೆ ಮಾಡುವ ಅಗತ್ಯವಾದರೂ ಏನಿದೆ?. ಗುಬ್ಬಿಯಿಂದ ದಾಬಸ್ಪೇಟೆಯವರೆಗೆ 100 ಅಡಿಗಳ ನಕಾಶೆ ರಸ್ತೆಯಿದ್ದು, ಅದನ್ನು ತೆರವು ಮಾಡಿ, ಅಭಿವೃದ್ಧಿಪಡಿಸಲಿ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಭೈರಸಂದ್ರರಮೇಶ್, ಪಾಲನೇತ್ರಯ್ಯ, ಹೊಸಹಳ್ಳಿ ಲಿಂಗರಾಜು, ಹೆತ್ತೇನಹಳ್ಳಿಮಂಜುನಾಥ್, ನರಸಿಂಹಯ್ಯ, ರಾಜಶೇಖರ್, ಸುರೇಶ್, ಪ್ರಕಾಶ್ ಸೇರಿದಂತೆ ನಂದಿಹಳ್ಳಿ, ಭೈರಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತ ಮುಖಂಡರು ಉಪಸ್ಥಿರಿದ್ದರು.
– ಕೆ.ಬಿ.ಚಂದ್ರಚೂಡ.
