ಇಸ್ರೇಲ್ & ಭಾರತದ ಸಂಬಂಧದಲ್ಲಿ ಮತ್ತೊಂದು ಐತಿಹಾಸಿಕ ದಿನ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸದಲ್ಲಿ ಇದ್ದಾರೆ. ಬರೋಬ್ಬರಿ 9 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರವಾಸ ಕೈಗೊಂಡಿದ್ದು, 2017 ಸಮಯದಲ್ಲಿ ಮೊದಲ ಬಾರಿಗೆ ಇಸ್ರೇಲ್ಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು.
ಮತ್ತೊಂದು ವಿಶೇಷತೆ ಏನೆಂದರೆ ಇಸ್ರೇಲ್ ನೆಸೆಟ್ ಅನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಮಾಸ್ ನಡೆಸಿದ ಕೃತ್ಯವನ್ನು ಖಂಡಿಸಿದ್ದಾರೆ. 2023 ಅಕ್ಟೋಬರ್ 7 ಇಸ್ರೇಲ್ ಎಂದಿಗೂ ಮರೆಯಲು ಆಗದು, ಏಕೆಂದರೆ ಇದೇ ದಿನ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ ಹಿಂಸಾಚಾರ ನಡೆಸಿದ್ದರು. ಈ ಘಟನೆಯನ್ನು ಪ್ರಧಾನಿ ಮೋದಿ ಅವರು ಈಗ ತೀವ್ರವಾಗಿ ಖಂಡಿಸಿದ್ದಾರೆ.
ಭಾರತ ಸದಾ ಇಸ್ರೇಲ್ ಬೆನ್ನಿಗೆ ನಿಂತಿದೆ ಎಂಬ ಭರವಸೆ ನೀಡಿರುವ ಪ್ರಧಾನಿ ಮೋದಿ ಅವರು, ಇದೀಗ ಉಗ್ರವಾದದ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶ ರವಾನೆ ಮಾಡುವ ಮೂಲಕ ಪಾಕಿಸ್ತಾನ ಹಾಗೂ ಇತರ ದೇಶಗಳಿಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪ್ರಧಾನಿ ಮೋದಿ ಅವರ ಮಾತಿಗೆ ಇಸ್ರೇಲ್ ಸಂಸದರು ಹಾಗೂ ಪ್ರಧಾನಿ ಕೂಡ ಖುಷಿಯಾಗಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎರಡೂ ದೇಶಗಳು ಈ ಸಮಯದಲ್ಲಿ ಒಗ್ಗಟ್ಟಿನ ಮಂತ್ರ ಸಾರಿವೆ. ಹಾಗೇ ಮತ್ತೊಂದು ಕಡೆ ಭವಿಷ್ಯದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಪರಸ್ಪರ ಕೈಜೋಡಿಸುವ ಮಾತು ಕೂಡ ಇದಾಗಿದೆ.
ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿ ಭಾಷಣ
ಇಸ್ರೇಲ್ನ ಸಂಸತ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 2023ರ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯನ್ನ ಖಂಡಿಸುವ ಜೊತೆಗೆ ಇಸ್ರೇಲ್ ಸಂಸತ್ತಿನಲ್ಲಿ ಮಾತನಾಡಲು ಈಗ ಅವಕಾಶ ಸಿಕ್ಕಿದ್ದನ್ನು ಗೌರವದ ಕ್ಷಣ ಎಂದು ವಿವರಿಸಿದರು. ಸಾವಿರಾರು ವರ್ಷ ಇತಿಹಾಸ ಹೊಂದಿರುವ ಎರಡು ಪ್ರಾಚೀನ ನಾಗರಿಕತೆಗಳು ಪರಸ್ಪರ ಸಂವಾದ ನಡೆಸುತ್ತಿರುವುದು ವಿಶೇಷ ಎಂದರು ಇದೇ ವೇಳೆ ಪ್ರಧಾನಿ ಮೋದಿ ಅವರು ಹೆಮ್ಮೆಯನ್ನ ವ್ಯಕ್ತಪಡಿಸಿದರು. ಅಲ್ಲದೆ ತಾವು 1950 ಸೆಪ್ಟೆಂಬರ್ 17 ರಂದು ಜನಿಸಿದ್ದೇನೆ ಎಂದು ಹೇಳಿದ ಪ್ರಧಾನಿ, ಅದೇ ದಿನ ಭಾರತವು ಇಸ್ರೇಲ್ ರಾಷ್ಟ್ರಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಿತ್ತು ಎಂದು ನೆನಪಿಸಿಕೊಂಡರು.
