ಭಾರತದಲ್ಲಿ ರಾ ( RAW), ಗುಪ್ತಚರ ದಳ ರಚನೆಯಾಗುವ ಮೊದಲೇ ಈ ಮಹಿಳೆ ಬ್ರಿಟಿಷರ ಅಧೀನದಲ್ಲಿದ್ದ ಬೀದಿಗಳಲ್ಲಿ ತಿರುಗಾಡಿ ರಹಸ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಈ ಗಟ್ಟಿಗಿತ್ತಿ ಮಹಿಳೆ ಬೇರಾರು ಅಲ್ಲ…ನೀರಾ ಆರ್ಯ! ಈಕೆ ಭಾರತದ ಮೊದಲ ಮಹಿಳಾ ಗೂಢಚಾರಿಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಪ್ರತಿಮ ದೇಶಪ್ರೇಮದ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಮೀರಾ ಅವರ ಜೀವನಗಾಥೆಯ ವಿವರ ಇಲ್ಲಿದೆ…
ಯಾರೀದು ನೀರಾ ಆರ್ಯ?
ನೀರಾ ಆರ್ಯ ಅವರು 1902 ಮಾರ್ಚ್ 5ರಂದು ಉತ್ತರಪ್ರದೇಶ ಬಾಗ್ ಪತ್ ನ ಖೇಕ್ರಾದಲ್ಲಿ ಜನಿಸಿದ್ದರು. ಮೀರಾ ತಂದೆ ಸೇಠ್ ಛಜ್ಜುಮಲ್ ಶ್ರೀಮಂತ ಉದ್ಯಮಿಯಾಗಿದ್ದರು. ಮೀರಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಲ್ಕತಾದಲ್ಲಿ ಪೂರ್ಣಗೊಳಿಸಿದ್ದರು.
ಮೀರಾ ಆರ್ಯ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯ ರಾಣಿ ಆಫ್ ಜಾನ್ಸಿ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿದ್ದರು. ಆರ್ಯ ಸೇರಿದಂತೆ ಎಲ್ಲಾ ಮಹಿಳೆಯರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಮೀರಾ ಆರ್ಯ ಅವರು ಐಎನ್ ಎನ ಗುಪ್ತಚರ ವಿಭಾಗದೊಳಗೂ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು.

ಮೀರಾ ಯಾವುದೇ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳದೇ, ಗೌಪ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಮೀರಾ ಅವರ ದೈನಂದಿನ ಚಟುವಟಿಕೆ ಶತ್ರುಗಳಿಗೆ ಅಗೋಚರವಾಗಿ ಕಾಣುವಂತೆ ಮಾಡಿತ್ತು. ಇದರ ಪರಿಣಾಮ ಮೀರಾ ಅವರು ಮುಕ್ತವಾಗಿ ಓಡಾಡಲು ಮತ್ತು ಮುಖ್ಯವಾದ ರಹಸ್ಯಗಳನ್ನು ತಲುಪಿಸಲು ಅವಕಾಶ ಮಾಡಿಕೊಟ್ಟಿತ್ತು!
ನೀರಾ ಅವರ ಗುಪ್ತಚರ ಕಾರ್ಯ:
- *ಸಾಮಾನ್ಯ ವಸ್ತುಗಳಲ್ಲಿ ಅಡಗಿಸಿಟ್ಟ ಸಂಕೇತ ಸಂದೇಶಗಳನ್ನು ರವಾನಿಸುವುದು
- *ಬ್ರಿಟಿಷ್ ಪಡೆಗಳ ಚಲನವಲನಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು.
- *ಸಂಭಾವ್ಯ ದಾಳಿಗಳ ಬಗ್ಗೆ ಐಎನ್ಎಗೆ ಎಚ್ಚರಿಕೆ ಸಂದೇಶ ನೀಡುವುದು.
- *ಗೌಪ್ಯವಾಗಿ ಉಳಿಯುವ ಮೂಲಕ ನೇತಾಜಿಯ ಚಲನವಲನಗಳ ಮಾಹಿತಿ ಸೋರಿಕೆ ತಡೆಯುವುದು.
- *ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಲು ಸ್ಥಳೀಯವಾಗಿ ಜನರನ್ನು ಸಂಘಟಿಸಿದ್ದಳು.
ನಿಯತ್ತಿನ ಪರೀಕ್ಷೆ-ನೇತಾಜಿ ರಕ್ಷಣೆಗಾಗಿ ಗಂಡನ ಹತ್ಯೆ!
ಎರಡನೇ ಜಾಗತಿಕ ಯುದ್ಧ, ಗುಪ್ತಚರ ಚಟುವಟಿಕೆಯು ಮೀರಾ ಆರ್ಯ ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತ್ತು. ನೀರಾ ಆರ್ಯ ಅವರು ಬ್ರಿಟಿಷ್ ಸಿಐಡಿ ಅಧಿಕಾರಿಯಾಗಿದ್ದ ಶ್ರೀಕಾಂತ್ ಜೈರಂಜನ್ ದಾಸ್ ಅವರನ್ನು ವಿವಾಹವಾಗಿದ್ದರು. ನೀರಾ ಇಂಡಿಯನ್ ನ್ಯಾಷನಲ್ ಆರ್ಮಿಗೆ ಸೇರ್ಪಡೆಗೊಂಡಿದ್ದ ವಿಚಾರ ತಿಳಿದ ಶ್ರೀಕಾಂತ್, ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನು ನೀರಾ ಹತ್ಯೆ ಮಾಡಬೇಕೆಂದು ತಾಕೀತು ಮಾಡಿದ್ದರಂತೆ! ಆದರೆ ನೀರಾ ನೇತಾಜಿ ಹತ್ಯೆಯನ್ನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಪತಿ, ಪತ್ನಿ ನೀರಾರನ್ನು ಗೃಹಬಂಧನದಲ್ಲಿ ಇರಿಸಿ, ನೇತಾಜಿ ಇರುವ ಸ್ಥಳವನ್ನು ಬಹಿರಂಗಪಡಿಸುವಂತೆ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು!

ತದನಂತರ ಬ್ರಿಟಿಷ್ ಸಿಐಡಿ ಅಧಿಕಾರಿ ಶ್ರೀಕಾಂತ್ ಒಂದು ದಿನ ನೇತಾಜಿಯತ್ತ ಗುರಿಯಿಟ್ಟು ಗುಂಡು ಹಾರಿಸಿದ್ದರು. ಆದರೆ ಪವಾಡಸದೃಶವಾಗಿ ನೇತಾಜಿ ಬದುಕುಳಿದಿದ್ದರು. ಆದರೆ ಅವರ ಚಾಲಕ ಸಾವಿಗೀಡಾಗಿದ್ದ. ಈ ವಿಷಯ ತಿಳಿದ ನೀರಾ, ಪತಿ ಶ್ರೀಕಾಂತ್ ಅವರನ್ನು ಚಾಕುವಿನಿಂದ ಇರಿದು ಕೊಂದು ಹಾಕಿದ್ದರು!
ಶ್ರೀಕಾಂತ್ ಅವರನ್ನು ಕೊಂದಿದ್ದಕ್ಕಾಗಿ ನೀರಾ ಅವರನ್ನು ಬಂಧಿಸಿ, ಅಂಡಮಾನ್ & ನಿಕೋಬಾರ್ ದ್ವೀಪಗಳ ಸೆಲ್ಯುಲರ್ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ನೀರಾಗೆ ಚಿತ್ರಹಿಂಸೆ ನೀಡಿದ್ದ ಬ್ರಿಟಿಷ್ ಅಧಿಕಾರಿ ಅವರ ಒಂದು ಸ್ತನವನ್ನು ಕತ್ತರಿಸಿ ಹಾಕಿದ್ದ. ಆದರೆ ಎಷ್ಟೇ ಹಿಂಸೆ ನೀಡಿದರೂ ನೀರಾ ಐಎನ್ ಎ ಹಾಗೂ ನೇತಾಜಿ ಕುರಿತು ಒಂದು ಚಿಕ್ಕ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ!
ಅತ್ಯಾಧುನಿಕ ಕಾಲದಲ್ಲಿ ಈಗ ಗುಪ್ತಚರ ಇಲಾಖೆ ಸೆಟಲೈಟ್ ಸೇರಿದಂತೆ ಆಧುನಿಕ ಉಪಕರಣಗಳನ್ನು ಬಳಸುತ್ತಿದೆ. ಆದರೆ ಅಂದು ನೀರಾ ದೇಶಕ್ಕಾಗಿ ಕೋಡ್ ವರ್ಡ್ ಸಂದೇಶಗಳ ಮೂಲಕ ಗುಪ್ತಚರ ಕಾರ್ಯ ನಿರ್ವಹಿಸಿದ್ದು ಸಾಮಾನ್ಯ ಕೆಲಸವಲ್ಲ. ಇಂತಹ ದಿಟ್ಟೆಯನ್ನು ಭಾರತ ದಶಕಗಳ ಕಾಲದವರೆಗೆ ಮರೆತೇ ಬಿಟ್ಟಿತ್ತು!
ಸ್ವಾತಂತ್ರ್ಯ ನಂತರ ನೀರಾ ಅವರನ್ನು ಅಂಡಮಾನ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ನೀರಾ ಅವರು ಕೊನೆಯುಸಿರೆಳೆಯುವವರೆಗೂ (1998ರ, ಜುಲೈ 26ರಂದು ನಿಧನ) ಹೈದರಾಬಾದ್ ನಲ್ಲಿ ವಾಸವಾಗಿದ್ದರು.
