ಒಸ್ಟ್ರಾವ (ಜೆಕ್ ಗಣರಾಜ್ಯ): 64ನೇ ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ವಿಶ್ವ ಅಥ್ಲೆಟಿಕ್ ಕಾಂಟಿನೆಂಟಲ್ ಟೂರ್ನಿಯಲ್ಲಿ ನೀರಜ್ಚೋಪ್ರಾ ಚಿನ್ನ ಗೆದ್ದಿದ್ದಾರೆ. ಜೂನ್ 20 ರಂದು ಪ್ಯಾರಿಸ್ ಡೈಮಂಡ್ ಲೀಗ್ ನಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಮತ್ತೊಂದು ಸಾಧನೆ ಮಾಡಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ 3ನೇ ಸುತ್ತಿನಲ್ಲಿ 85.29 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನವನ್ನು ತಮ್ಮ ಹೆಸರಿಗೆ ಬರೆದುಕೊಂಡರು. ದಕ್ಷಿಣ ಆಫ್ರಿಕಾದ ಡೌ ಸ್ಮಿತ್ 84.12 ಮೀ. ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದರು.
83.63 ಮೀ. ದೂರ ಎಸೆಯುವ ಮೂಲಕ ಗ್ರೆನೆಡಾದ ಆ್ಯಂಡರ್ಸನ್ ಕಂಚಿನ ಪದಕ ಗೆದ್ದರು. ಭಾರತದ ಜಾವೆಲಿನ್ ಪಟು ಚೋಪ್ರಾ, ಗಾಯದ ಹಿನ್ನೆಲೆಯಲ್ಲಿ ಕಳೆದ 2 ಬಾರಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಜು.5ರಂದು ಬೆಂಗಳೂರಿನಲ್ಲಿ ನಡೆವ ಟೂರ್ನಿ ನೀರಜ್ ಅವರ ಮುಂದಿನ ಟೂರ್ನಿಯಾಗಿದೆ.
90 ಮೀಟರ್ ಎಸೆತದ ಅನಗತ್ಯ ಒತ್ತಡವನ್ನು ಬದಿಗಿರಿಸಿ, ಮುಂಬರುವ ಟೋಕಿಯೊ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವುದೇ ತನ್ನ ಗುರಿ ಎಂಬುದಾಗಿ ಜಾವೆಲಿನ್ ಸೂಪರ್ಸ್ಟಾರ್ ನೀರಜ್ ಚೋಪ್ರಾ ಹೇಳಿದ್ದಾರೆ.
