ನವದೆಹಲಿ: ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿರುವ ‘ಕಾವೇರಿ’ ಎಂಬ ಹೆಸರಿನ ಹೊಸ ಕರ್ನಾಟಕ ಭವನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಏ.2) ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
51 ವರ್ಷ ಹಳೆಯದಾದ ಮೂರು ಅಂತಸ್ತಿನ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಅಂದಾಜು 82 ಕೋಟಿ ರೂ. ವೆಚ್ಚದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ಕಟ್ಟುವುದಕ್ಕೆ ಕರ್ನಾಟಕ ಸರ್ಕಾರ 2019ರಲ್ಲಿ ಅನುಮೋದನೆ ನೀಡಿತ್ತು. ಆಗ ಎಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಕಟ್ಟಡ ನಿರ್ಮಾಣದ ವೆಚ್ಚ 140 ಕೋಟಿ ರೂ.ಗೆ ಏರಿದೆ.

50 ವರ್ಷಕ್ಕೂ ಹಳೆಯದಾದ ಕರ್ನಾಟಕ ಭವನ ಕಟ್ಟಡವನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಸುರಕ್ಷಿತ ಎಂದು ಘೋಷಿಸಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಎಚ್ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮತ್ತು ವಿ ಸೋಮಣ್ಣ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಸಚಿವರಾದ ಎಚ್ಸಿ ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಕೂಡ ಉಪಸ್ಥಿತರಿರುವರು.
‘ಕಾವೇರಿ’ ಕರ್ನಾಟಕ ಭವನ ಕಟ್ಟಡವು ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ವಿವಿಐಪಿಗಳಿಗೆ ವಿಶೇಷ ಸೂಟ್ಗಳನ್ನು (suites) ಒಳಗೊಂಡಿದೆ.

532 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ 2B+G+6UF ಗಳನ್ನೊಳಗೊಂಡಂತೆ ಒಟ್ಟಾರೆಯಾಗಿ 9 ಮಹಡಿಗಳ 12,212 ಚ.ಮೀ ವಿಸ್ತೀರ್ಣದ (1,31,450 ಚದರ ಅಡಿ) ಕಟ್ಟಡವನ್ನು ನಿರ್ಮಿಸಲಾಗಿದೆ. ಇದರಲ್ಲಿ 2 VVIP ಕೊಠಡಿ, 32 ಇತರ ಕೊಠಡಿ, 18 ಸಿಂಗಲ್ ರೂಮ್ (Total 52 Rooms) and 86 ಶೌಚಗೃಹಗಳು ಇವೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯದ ಪ್ರತಿಷ್ಠಿತ ರಾಯಭಾರಿ ಸಂಸ್ಥೆಯಾಗಿ ಕರ್ನಾಟಕ ಭವನವನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು, ವಿದೇಶಗಳ ರಾಯಭಾರಿ ಕಛೇರಿಗಳ ಜೊತೆಗೆ, ದೆಹಲಿಯಲ್ಲಿನ ಕೇಂದ್ರ ಮಂತ್ರಾಲಯದ ಇತರೆ ವಿಭಾಗಗಳು ಹಾಗೂ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯ ಸಂಪರ್ಕ ಸಾಧಿಸುವುದರೊಂದಿಗೆ, ರಾಜ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ರಾಜ್ಯದ ಮೂಲ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕರ್ನಾಟಕ ಭವನವು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯಾಗಿ, ಕರ್ನಾಟಕದ ಚುನಾಯಿತ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳಿಗೆ ಆತಿಥ್ಯ ಒದಗಿಸುತ್ತಿದೆ.
