ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಸಂಸ್ಥೆಯ ‘ಸ್ವದೇಶಿ’ 4ಜಿ ನೆಟ್ವರ್ಕ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಲಿದ್ದಾರೆ.
ಒಡಿಶಾದ ಜಾರ್ಸುಗುಡದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವದೇಶಿ ತಂತ್ರಜ್ಞಾನ ಆಧಾರಿತ 4ಜಿ ನೆಟ್ವರ್ಕ್ನ್ನು ಉದ್ಘಾಟಿಸಲಿದ್ದಾರೆ. ಈ ಮೂಲಕ ಭಾರತವು ಟೆಲಿಕಾಂ ಉಪಕರಣಗಳನ್ನು ತಯಾರಿಸುವ ರಾಷ್ಟ್ರಗಳ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಈಗಾಗಲೇ ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ, ಚೀನಾ ದೇಶಗಳು ಈ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಭಾರತ ಐದನೇ ರಾಷ್ಟ್ರವಾಗಿದೆ.
ಇದನ್ನು ಓದಿ : 26 ಜನರ ಬಲಿ ಪಡೆದ ಪಹಲ್ಗಾಮ್ ದಾಳಿಕೋರರಿಗೆ ದಾರಿ ತೋರಿದ್ದು ಒಬ್ಬ ಶಿಕ್ಷಕ!
ಇದೇ ಸಂದರ್ಭದಲ್ಲಿ ಪ್ರಧಾನಿಯವರು ಡಿಜಿಟಲ್ ಭಾರತ್ ನಿಧಿ ಯೋಜನೆ ಅಡಿಯಲ್ಲಿ ಭಾರತದ ಶೇಕಡಾ 100 ರಷ್ಟು 4ಜಿ ಸ್ಯಾಚುರೇಶನ್ ನೆಟ್ವರ್ಕ್ ಯೋಜನೆಗೂ ಚಾಲನೆ ನೀಡಲಿದ್ದಾರೆ.
ಈ ಯೋಜನೆಯೊಂದಿಗೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಗೂ ವೇಗದ ಇಂಟರ್ನೆಟ್ ಸೇವೆ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
