ನವದೆಹಲಿ: “ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಬುದ್ಧಿವಂತಿಕೆಯಿಂದ ಅನಂತ ಸಾಧ್ಯತೆಗಳಿಗೆ” ಎಂಬ ಆಕರ್ಷಕ ವಿಷಯದೊಂದಿಗೆ ಭಾರತವು 2025ರ ಆಗಸ್ಟ್ 23ರಂದು ತನ್ನ ಎರಡನೇ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಿತು.
2023ರ ಆಗಸ್ಟ್ 23ರಂದು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿದು ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಘೋಷಿಸಿದ್ದರು. ಕಳೆದ ವರ್ಷದಿಂದ ಪ್ರಾರಂಭವಾದ ಈ ಆಚರಣೆಯು, ಈ ಬಾರಿ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಗಳು, ಮಹಾವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ವಿಶೇಷ ಉಪನ್ಯಾಸ, ಪ್ರದರ್ಶನ, ವಿಜ್ಞಾನ ಮೇಳ, ಮಾದರಿ ರಾಕೆಟ್ ಉಡಾವಣೆ ಹಾಗೂ ವಿದ್ಯಾರ್ಥಿಗಳಿಗಾಗಿ ಕ್ವಿಜ್, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಇಸ್ರೋ ಕೇಂದ್ರಗಳಲ್ಲಿ ವಿಜ್ಞಾನಿಗಳ ಸಂವಾದ, ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ ಹಾಗೂ ಭವಿಷ್ಯದ ಯೋಜನೆಗಳ ಕುರಿತ ಚರ್ಚೆಗಳು ದೇಶದಾದ್ಯಂತ ನಡೆಯಿತು.
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳನ್ನು ಸ್ಮರಿಸುತ್ತಾ, ಬಾಹ್ಯಾಕಾಶ ಸಂಶೋಧನೆಯ ಮೂಲಕ ಪ್ರಪಂಚದ ಅಗ್ರ ರಾಷ್ಟ್ರಗಳಲ್ಲಿ ಭಾರತ ಪಡೆದಿರುವ ಸ್ಥಾನವನ್ನು ಮತ್ತೊಮ್ಮೆ ಪ್ರಸ್ತುತಪಡಿಸಲಾಯಿತು. “ಆರ್ಯಭಟ” ಉಪಗ್ರಹದಿಂದ ಪ್ರಾರಂಭಿಸಿ ಗಗನಯಾನ, ಚಂದ್ರಯಾನ, ಮಂಗಳಯಾನಗಳಂತಹ ಮಹತ್ವದ ಪ್ರಯೋಗಗಳನ್ನು ಉಲ್ಲೇಖಿಸಿ, ಪ್ರಾಚೀನ ಭಾರತದ ಜ್ಞಾನ ಪರಂಪರೆಯಿಂದ ಇಂದಿನ ಅಂತರಿಕ್ಷ ಸಂಶೋಧನೆಗೆ ಬಂದಿರುವ ಪಯಣವನ್ನು ಚರ್ಚಿಸಲಾಯಿತು.
ಈ ಆಚರಣೆಯ ಮೂಲಕ ಹೊಸ ತಲೆಮಾರಿಗೆ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನಗಳತ್ತ ಆಕರ್ಷಣೆ ಮೂಡಿಸಿ, ಸಂಶೋಧನಾ ಮನೋಭಾವ ಬೆಳೆಸುವುದು ಉದ್ದೇಶವಾಗಿದೆ ಎಂದು ವಿಜ್ಞಾನ ತಜ್ಞರು ಅಭಿಪ್ರಾಯಪಟ್ಟರು.
