ಕುವಲಾಲಂಪುರ : ಮಲೇಶಿಯಾದಲ್ಲಿ ಶೀಘ್ರದಲ್ಲೇ ಹೊಸ ಭಾರತೀಯ ಕಾನ್ಸುಲೇಟ್ ತೆರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಇದರಿಂದ ಭಾರತ–ಮಲೇಶಿಯಾ ನಡುವಿನ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ ಎಂದು ಅವರು ಹೇಳಿದರು.
ಕುಆಲಾಲಂಪುರದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಮೂಲದ ಮಲೇಶಿಯಾ ನಾಗರಿಕರಿಗೆ OCI (ಒವರ್ಸೀಸ್ ಸಿಟಿಜನ್ಶಿಪ್ ಆಫ್ ಇಂಡಿಯಾ) ಕಾರ್ಡ್ ಅರ್ಹತೆಯನ್ನು ಆರನೇ ತಲೆಮಾರಿಗೆ ವಿಸ್ತರಿಸಿರುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಶ್ಲಾಘಿಸಿದರು.
“ಭಾರತ ನಿಮ್ಮನ್ನು ಸದಾ ತೆರೆದ ಹೃದಯದಿಂದ ಸ್ವಾಗತಿಸುತ್ತದೆ. ಅದಕ್ಕಾಗಿಯೇ ಭಾರತೀಯ ಮೂಲದ ಮಲೇಶಿಯಾ ನಾಗರಿಕರಿಗೆ ಆರನೇ ತಲೆಮಾರಿಗೆ OCI ಅರ್ಹತೆಯನ್ನು ವಿಸ್ತರಿಸಲಾಗಿದೆ” ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಮಲೇಶಿಯಾ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಲು ಸಹಾಯವಾಗುವಂತೆ ತಿರುವಳ್ಳುವರ್ ವಿದ್ಯಾರ್ಥಿವೇತನವನ್ನು ಪರಿಚಯಿಸಿದರು. ಜೊತೆಗೆ Know India Programme ಬಗ್ಗೆ ಉಲ್ಲೇಖಿಸಿ, ಭಾರತೀಯ ಸಮುದಾಯದ ಯುವಕರನ್ನು ಭಾರತಕ್ಕೆ ಆಹ್ವಾನಿಸಿದರು.
ಪ್ರಧಾನಿ ಮೋದಿ ಅವರು ಭಾರತೀಯ ಮೂಲದವರ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ವಿಶೇಷ ಪ್ರದರ್ಶನಕ್ಕೂ ಭೇಟಿ ನೀಡಿ, ಮಲೇಶಿಯಾದಲ್ಲಿನ ಭಾರತೀಯ ಸಮುದಾಯದ ಕೊಡುಗೆಯನ್ನು ಮೆಚ್ಚಿದರು.
ಭಾರತ–ಮಲೇಶಿಯಾ ಸಮಗ್ರ ತಂತ್ರಾತ್ಮಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಎರಡು ದಿನಗಳ ಮಲೇಶಿಯಾ ಪ್ರವಾಸದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
