ನವದೆಹಲಿ: ಭಾರತೀಯ ರೈಲ್ವೇ ಅಭಿವೃದ್ಧಿಪಡಿಸಿರುವ ದೇಶೀಯ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯ ಸುಧಾರಿತ ಆವೃತ್ತಿ ‘ಕವಚ್ 4.0’ ಈಗ ಮತ್ತಷ್ಟು ಬಲಿಷ್ಠಗೊಂಡಿದ್ದು, ಸೆಪ್ಟೆಂಬರ್ ವೇಳೆಗೆ 654 ಕಿ.ಮೀ. ಉದ್ದದ ರೈಲು ಹಳಿಗಳಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ರೈಲ್ವೇ ಇಲಾಖೆ ಘೋಷಿಸಿದೆ.
ರೈಲುಗಳ ಸುರಕ್ಷತೆಯನ್ನು ವೃದ್ಧಿಸಲು, ಡಿಕ್ಕಿ ಅಪಘಾತಗಳನ್ನು ತಡೆಯಲು ಹಾಗೂ ತುರ್ತು ಸಮಯದಲ್ಲಿ ತ್ವರಿತ ಸ್ಪಂದನೆ ನೀಡಲು ‘ಕವಚ್ 4.0’ ಮಹತ್ವದ ಪಾತ್ರವಹಿಸಲಾಗುತ್ತಿದೆ. ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ತಯಾರಿಸಲಾಗಿದೆ.
2016ರ ಫೆಬ್ರುವರಿಯಲ್ಲಿ ಪ್ರಯಾಣಿಕ ರೈಲುಗಳಲ್ಲಿ ಮೊದಲ ಬಾರಿಗೆ ‘ಕವಚ್’ ತಂತ್ರಜ್ಞಾನವನ್ನು ಬಳಸಲಾಗಿತ್ತು. ನಂತರ 2020ರ ಜುಲೈನಲ್ಲಿ ಇದನ್ನು ರಾಷ್ಟ್ರೀಯ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆ ಎಂದು ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು. ಇದೀಗ 4.0 ಆವೃತ್ತಿ ಇನ್ನಷ್ಟು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಕಾರ್ಯಾರಂಭ ಮಾಡಿದೆ.
‘ಕವಚ್ 4.0’ ಯ ಪ್ರಮುಖ ಲಕ್ಷಣಗಳು
- ಅಪಘಾತ ತಡೆಗಟ್ಟುವಿಕೆ: ಟ್ರ್ಯಾಕ್ ಮೇಲೆ ಇರುವ ಅಪಾಯಗಳನ್ನು ಮುಂಚಿತವಾಗಿ ಗುರುತಿಸಿ, ರೈಲುಗಳನ್ನು ಸುರಕ್ಷಿತಗೊಳಿಸುವ ವ್ಯವಸ್ಥೆ.
- ಸ್ವಯಂಚಾಲಿತ ಬ್ರೇಕಿಂಗ್: ಮಾನವ ದೋಷದ ಸಾಧ್ಯತೆ ಇರುವ ಸಂದರ್ಭದಲ್ಲೂ ತುರ್ತು ಬ್ರೇಕ್ಗಳನ್ನು ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ.
- ಎಲ್ಲಾ ಹವಾಮಾನದಲ್ಲೂ ಕಾರ್ಯ: ಮಳೆ, ಮಂಜು, ರಾತ್ರಿ—ಯಾವುದೇ ಹವಾಮಾನದಲ್ಲೂ ನಿಖರ ಕಾರ್ಯಕ್ಷಮತೆ.
- ಉನ್ನತ ಮಟ್ಟದ ಸುರಕ್ಷತೆ: ರೈಲುಗಳ ವೇಗ, ಅಂತರ ಹಾಗೂ ಮಾರ್ಗ ಸಂಯೋಜನೆಗಳನ್ನು ಸಂಯತ್ರಿಸುವ ಸುಧಾರಿತ ತಂತ್ರಜ್ಞಾನ.
- ದೇಶೀಯ ತಂತ್ರಜ್ಞಾನ: ಪೂರ್ಣವಾಗಿ ‘ಮೇಡ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ನೀಡುತ್ತಿರುವ ವ್ಯವಸ್ಥೆ.
‘ಕವಚ್ 4.0’ ಅಳವಡಿಕೆಯಿಂದ ರೈಲು ಪ್ರಯಾಣವು ಇನ್ನಷ್ಟು ಸುರಕ್ಷಿತವಾಗಲಿದ್ದು, ಭವಿಷ್ಯದಲ್ಲಿ ದೇಶದ ಎಲ್ಲ ಪ್ರಮುಖ ಮಾರ್ಗಗಳಲ್ಲಿ ಈ ತಂತ್ರಜ್ಞಾನ ಜಾರಿಗೆ ಬರಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
