ಹಾಸನ- ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದ್ದ ತಾಯಿ-ಮಗನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಬ್ಬರ ಸಾವಿನ ನಂತರ ಸ್ಫೋಟಕ ಸಂಗತಿ ಹೊರಬಿದ್ದಿದ್ದು, ಹೆಚ್ಐವಿ ಸೋಂಕಿತನಾಗಿದ್ದ ಭರತ್, ಪಂಚಾಯ್ತಿ ನಡೆದರೆ ಎಲ್ಲವೂ ಬಯಲಾಗಲಿದೆ ಎಂದು ಮಾನ-ಮರ್ಯಾದೆಗೆ ಅಂಜಿ ತಾಯಿ ಜಯಂತಿ ಜೊತೆ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಭರತ್ಗೆ ಎಚ್ಐವಿ ಇರುವುದನ್ನು ಸ್ವತಃ ಮೃತನ ಪತ್ನಿ ಗೀತಾ ಕುಟುಂಬದವರಿಂದಲೇ ಬಹಿರಂಗ ಪಡಿಸಿದ್ದಾರೆ. 8 ತಿಂಗಳ ಹಿಂದೆ ಭರತ್ಗೆ 4 ಲಕ್ಷ ವರದಕ್ಷಿಣೆ, 100 ಗ್ರಾಂ ಚಿನ್ನ ನೀಡಿ, ಗಂಡಸಿ ಹೋಬಳಿ ಬಾಗೂರನಹಳ್ಳಿಯ ಗೀತಾ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಅದಕ್ಕೂ ಮುನ್ನವೇ ಭರತ್ ಹೆಚ್ಐವಿ ಸೋಂಕಿತನಾಗಿದ್ದ ಎನ್ನಲಾಗಿದೆ. ಮಾರಣಾಂತಿಕ ಕಾಯಿಲೆ ಇರುವುದನ್ನೂ ಮುಚ್ಚಿಟ್ಟು ಮದುವೆ ಆಗಿದ್ದಲ್ಲದೆ ನಿತ್ಯ ಮಾತ್ರೆ ತೆಗೆದುಕೊಳ್ಳುತ್ತಿದ್ದ.
ಮದುವೆಯಾದ 15 ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ ಭರತ್, ನಂತರ ಅಂತರ ಕಾಯ್ದುಕೊಂಡು, ಪತ್ನಿ ಜೊತೆ ಸೇರುತ್ತಿರಲಿಲ್ಲ. ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ಗೀತಾ ಹೆಣ್ಣೆ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದೆಲ್ಲಾ ಸುಳ್ಳು ಆರೋಪ ಹೊರಿಸಿದ್ದ. ಕೆಲ ದಿನ ಸಂಬಂಧಿಕರ ಮನೆಯಲ್ಲಿ ಗೀತಾಳನ್ನು ಉಳಿಸಿದ್ದ. ಹೆಚ್ಐವಿಗೆ ರೋಗಕ್ಕೆ ತೆಗೆದುಕೊಳ್ಳುವ ಮಾತ್ರೆ ಡಬ್ಬಿಯನ್ನು ಕೊರಳಿಗೆ ಕಟ್ಟಿಕೊಂಡು ತಿರುಗುತ್ತಿದ್ದ. ಭರತ್ ಮಹಾಪರಾಧ ತಿಳಿಯದೆ ಸಂಬಂಧಿಕರು ಮತ್ತೊಂದು ಪಂಚಾಯ್ತಿ ನಡೆಸಿ ಗೀತಾಳಿಗೆ ಬುದ್ದಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು.
ಆದರೆ ಕೆಲವೇ ದಿನಗಳಲ್ಲಿ ಗೀತಾ ಏನೂ ತಪ್ಪು ಮಾಡದಿದ್ದರೂ ತವರು ಮನೆಗೆ ಕಳಿಸಿದ್ದ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು ಒಂದು ಕಡೆಯಾದ್ರೆ ಗಂಡ ನಿತ್ಯ ಮಾತ್ರೆ ತೆಗೆದುಕೊಳ್ಳುತ್ತಿದ್ದುದು ಗೀತಾಳನ್ನು ಅನುಮಾನ ಮೂಡಿಸಿತ್ತು. ಒಂದು ದಿನ ಭರತ್ ಸ್ನಾನಕ್ಕೆ ಹೋಗಿದ್ದಾಗ ಗೀತಾ ಮಾತ್ರೆ ಫೋಟೋ ತೆಗೆದು, ತನ್ನ ಅಕ್ಕನಿಗೆ ಕಳಿಸಿದ್ದಳು.

ಗೀತಾ ಸಹೋದರಿ ಫೋಟೋಗಳನ್ನು ನರ್ಸ್ಗೆ ತೋರಿಸಿದಾಗ ಹೆಚ್ ಐವಿ ಸೋಂಕಿತರು ತೆಗೆದುಕೊಳ್ಳುವ ಮಾತ್ರೆ ಎಂದು ನರ್ಸ್ ತಿಳಿಸಿದರು. ಭರತ್ ಹೆಚ್ಐವಿ ಸೋಂಕಿತ ಎಂದು ಅನುಮಾನಗೊಂಡ ಗೀತಾ ಕುಟುಂಬಸ್ಥರು, ಮಾ.10ರಂದು ಮೂರನೇ ಪಂಚಾಯ್ತಿಗೆ ವೇದಿಕೆ ಸಿದ್ಧಪಡಿಸಿ ಇಬ್ಬರೂ ಮೆಡಿಕಲ್ ಟೆಸ್ಟ್ ಮಾಡಿಸಬೇಕು, ಭರತ್ ಆಧಾರ್ ಕಾರ್ಡ್ ತರಬೇಕು ಎಂದು ಸೂಚಿಸಲಾಯಿತು.
ಆದರೆ ಭರತ್ ಆಧಾರ್ ಕಾರ್ಡ್ ಯಾರಿಗೂ ಕೊಡಲಿಲ್ಲ. ಮೊದಲಿಂದಲೂ ಗೌಪ್ಯವಾಗಿಟ್ಟಿದ್ದ. ಪಂಚಾಯ್ತಿ ನಡೆದರೆ ತನ್ನ ಗುಟ್ಟು ರಟ್ಟಾಗಲಿದೆ ಎಂದು ಮಾ.9 ರ ರಾತ್ರಿ ಬೆಂಗಳೂರಿನಿಂದ ತಾಯಿ ಜೊತೆ ಬಂದವನೇ ದಿಡಗದ ಸಂಬಂಧಿಕರ ಮನೆಗೆಹೋಗಿ, ಬೈಕ್ ಪಡೆದು ಕಬ್ಬಳಿ ಮನೆಗೆ ಬಂದು, ಅಲ್ಲಿಂದ ನೆರಲೆಕೆರೆ ಗ್ರಾಮದ ಅಜ್ಜಿ ಮನೆಗೆ ತಾಯಿ-ಮಗ ತೆರಳಿ ಒಡವೆ ಕೊಟ್ಟು ಮರಳಿ ಕಬ್ಬಳಿಗೆ ಬಂದು ಆತ್ಮಹ*ತ್ಯೆ ಮಾಡಿಕೊಂಡಿದ್ದರು.
ಆದರೆ ಮೃತ ಜಯಂತಿ ಹೆಸರಿನಲ್ಲಿದ್ದ 150 ತೆಂಗಿನ ಮರ, 2 ಎಕರೆ ಹೊಲ ಮತ್ತು 1 ಮನೆ ಲಪಟಾಯಿಸಲು ಸಂಬಂಧಿಕರು, ಗೀತಾಳ ಹಠಮಾರಿತನ, ಮಾನಸಿಕ ಹಿಂಸೆಯಿಂದ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಹೊರಿಸಿದ್ದರು. ಆದರೀಗ ನಿಜ ಕಾರಣ ಬಯಲಾಗಿದ್ದು, ಭರತ್ನಿಂದ, ಗೀತಾಳಿಗೆ ಅನ್ಯಾಯ ಆಗಿದೆ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
