ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೌದು, ಏಪ್ರಿಲ್ 22 ರಂದು, ಪೆಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಉಗ್ರರು 27 ಹಿಂದೂ ಪ್ರವಾಸಿಗರನ್ನು ಗುಂಡಿಟ್ಟು ಸಾಯಿಸಿದ್ದು ಸದ್ಯ ಎನ್ಐಎ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಈ ದಾಳಿಯಲ್ಲಿ ಸ್ಥಳೀಯ ಪೋನಿ ಸವಾರರು ಅಂದರೆ ಮ್ಯೂಲ್ ಸವಾರರ ಪಾತ್ರವನ್ನು ಅನುಮಾನಾಸ್ಪದವೆಂದು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಇವುಗಳಲ್ಲಿ ಕೆಲವು ದಾಳಿಕೋರರ ಚಲನವಲನಕ್ಕೆ ಇವರು ಸಹಾಯ ಮಾಡಿರಬಹುದು ಎಂದು ತನಿಖಾ ಸಂಸ್ಥೆಗಳು ಶಂಕಿಸಿ ಪಹಲ್ಗಾಮ್ ದಾಳಿಯ ತನಿಖೆಗೆ ಸಂಬಂಧಿಸಿದಂತೆ, ಎನ್ಐಎ ಇದುವರೆಗೆ ಸುಮಾರು 1500 ರಿಂದ 2000 ಪೋನಿ ಸವಾರರನ್ನು ವಿಚಾರಣೆಗೆ ಒಳಪಡಿಸಿದ್ದು ಭಯೋತ್ಪಾದಕರ ಚಲನೆಯ ಮಾರ್ಗ ಯಾವುದು ಮತ್ತು ಅವರು ದುರ್ಗಮ ಪರ್ವತ ಪ್ರದೇಶಗಳಿಂದ ಹೇಗೆ ಪ್ರವೇಶಿಸಿದರು ಎಂಬುದನ್ನು ತಿಳಿಯುವ ಪ್ರಯತ್ನ ನಡೆಸುತ್ತಿದೆ.ಮೂಲಗಳ ಪ್ರಕಾರ, ದಾಳಿ ನಡೆದಾಗ, ಪಹಲ್ಗಾಮ್ನ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಅನೇಕ ಹೇಸರಗತ್ತೆ ಚಾಲಕರು ಇದ್ದರು.
NIA ಮೂಲಗಳ ಪ್ರಕಾರ, ಈ ಹೇಸರಗತ್ತೆ ಚಾಲಕರನ್ನು ಕಳೆದ ಎಂಟು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆಯ ಸಮಯದಲ್ಲಿ ಕೆಲವು ಪೋನಿ ಸವಾರರ ಹೇಳಿಕೆಗಳು ಪರಸ್ಪರ ಹೊಂದಿಕೆಯಾಗುತ್ತಿಲ್ಲವಾದ್ದರಿಂದ ಇವರ ಮೇಲೆ ಅನುಮಾನಗಳು ಹೆಚ್ಚಾಗಿದೆ. ತನಿಖಾ ಸಂಸ್ಥೆಗಳು ಅಂತಹ ಕೆಲವು ಅನುಮಾನಾಸ್ಪದ ಸವಾರರನ್ನು ಸಹ ವಶಕ್ಕೆ ಪಡೆದಿದ್ದು, ಅವರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಅನೇಕ ಹೇಸರಗತ್ತೆ ಚಾಲಕರ ಚಟುವಟಿಕೆಗಳ ಮೇಲೆ ತಾಂತ್ರಿಕ ಕಣ್ಗಾವಲು ಇಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಸಂಪರ್ಕದ ಬಗ್ಗೆ ಸುಳಿವು ಪಡೆಯಲು ಅವರ ಮೊಬೈಲ್ ಡೇಟಾ, ಕರೆ ವಿವರಗಳು ಮತ್ತು ಸ್ಥಳ ಇತಿಹಾಸವನ್ನು ಸ್ಕ್ಯಾನ್ ಮಾಡಲಾಗುತ್ತಿದೆ.
ಭಯೋತ್ಪಾದಕರಿಗೆ ಪ್ರದೇಶದ ಭೌಗೋಳಿಕ ಮಾಹಿತಿಯನ್ನು ಒದಗಿಸುವಲ್ಲಿ ಸ್ಥಳೀಯ ನೆರವಿದೆ ಎನ್ನುವ ಸಂಶಯವಿದ್ದು ವಿಚಾರಣೆ ಪ್ರಕ್ರಿಯೆಯು ಮುಂದುವರಿಯಲಿದ್ದು, ಅಗತ್ಯವಿದ್ದರೆ ಹೆಚ್ಚಿನ ಬಂಧನಗಳನ್ನು ಸಹ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
