ಅಲಹಾಬಾದ್, ಡಿಸೆಂಬರ್ 13: ಪತಿಗಿಂತ ಉತ್ತಮ ಜೀವನ ನಡೆಸುತ್ತಿರುವ ಹಾಗೂ ಹೆಚ್ಚಿನ ಆದಾಯ ಹೊಂದಿರುವ ಪತ್ನಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶ ಪಡೆಯಲು ಹಕ್ಕಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗೌತಮ್ ಬುದ್ಧ ನಗರ ನಿವಾಸಿ ಅಂಕಿತ್ ಸಹಾ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್, ಪತಿಗೆ ತಿಂಗಳಿಗೆ 5,000 ರೂ.ಗಳನ್ನು ಜೀವನಾಂಶವಾಗಿ ಪಾವತಿಸುವಂತೆ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದರು.
ವಿಚಾರಣೆಯಲ್ಲಿ, ಪತ್ನಿ ಉದ್ಯೋಗದಲ್ಲಿದ್ದು ಹಿರಿಯ ಮಾರಾಟ ಸಂಯೋಜಕರಾಗಿ ತಿಂಗಳಿಗೆ ಸುಮಾರು 36,000 ರೂ. ಆದಾಯ ಗಳಿಸುತ್ತಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಆದಾಯದ ಮಟ್ಟವನ್ನು ಸಮಾನಗೊಳಿಸುವ ಉದ್ದೇಶದಿಂದ ಜೀವನಾಂಶ ಪಾವತಿಸುವಂತೆ ಕುಟುಂಬ ನ್ಯಾಯಾಲಯ ಪತಿಗೆ ಸೂಚಿಸಿತ್ತು. ಆದರೆ, ಪತ್ನಿ ಸ್ವಚ್ಛ ಕೈಗಳಿಂದ ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ತನ್ನ ಅರ್ಜಿಯಲ್ಲಿ ತಾನು ನಿರುದ್ಯೋಗಿ ಹಾಗೂ ಅಶಿಕ್ಷಿತ ಎಂದು ಹೇಳಿಕೊಂಡಿದ್ದರೂ, ದಾಖಲೆಗಳು ಅವಳು ಸ್ನಾತಕೋತ್ತರ ಪದವಿಧರೆಯಾಗಿದ್ದು ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವುದನ್ನು ಬಹಿರಂಗಪಡಿಸಿದೆ. ಜೀವನಾಂಶ ಪಡೆಯಲು ಅವಳು ತಪ್ಪು ಮಾಹಿತಿ ನೀಡಿದ್ದಾಳೆ ಎಂದು ನ್ಯಾಯಾಲಯ ಗಮನಿಸಿದೆ.
ಈ ಹಿನ್ನೆಲೆಯಲ್ಲಿ, ಪತಿಗಿಂತ ಉತ್ತಮ ಆದಾಯ ಹೊಂದಿರುವ ಪತ್ನಿಗೆ ಸಿಆರ್ಪಿಸಿ 125ರಡಿ ಜೀವನಾಂಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು.
