ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಯಾವುದೇ ಅನುಮತಿ ನೀಡಿಲ್ಲ: ಸಚಿವ ಸಂತೋಷ್ ಲಾಡ್

ಬೆಂಗಳೂರು: ಕೆಲಸದ ಅವಧಿ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆ ಇನ್ನೂ ಚರ್ಚಾ ಹಂತದಲ್ಲಿಯೇ ಇರುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕೈಗಾರಿಕೆಗೆ ಇದುವರೆಗೆ ಅಧಿಕೃತ ಅನುಮತಿ ನೀಡಿಲ್ಲ ಎಂದಿದ್ದಾರೆ. ಕೆಲವು ಐಟಿ ಮತ್ತು ಕೈಗಾರಿಕಾ ವಲಯಗಳಲ್ಲಿ ದಿನಕ್ಕೆ 12 ಗಂಟೆಗಳವರೆಗೆ ಕೆಲಸದ ಅವಧಿ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯೋಗಿಗಳಿಂದ ವಿರೋಧ ವ್ಯಕ್ತವಾಗಿದೆ. ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.