ಬೆಂಗಳೂರು, ಫೆ.24: ರಾಜ್ಯದಲ್ಲಿ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ವಿಚಾರ ಜನರಲ್ಲಿ ಆತಂಕ ಮೂಡಿಸಿರುವ ನಡುವೆ, ಇದೀಗ ಕುಡಿಯುವ ನೀರಿನ ಗುಣಮಟ್ಟ ಕುರಿತೂ ಚಿಂತಾಜನಕ ವರದಿ ಹೊರಬಂದಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಪರೀಕ್ಷಿಸಲಾದ ನೀರಿನ ಮಾದರಿಗಳಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ಬಹಿರಂಗವಾಗಿದೆ.
2023ರಿಂದ 2026ರ ಫೆಬ್ರವರಿವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾದ 9.34 ಲಕ್ಷ ನೀರಿನ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ ಸುಮಾರು 53 ಸಾವಿರ ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಕಂಡುಬಂದಿವೆ. ಇನ್ನೂ 7,696 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಸೋಂಕಿನ ಲಕ್ಷಣಗಳು ಪತ್ತೆಯಾಗಿರುವುದು ಆರೋಗ್ಯದ ದೃಷ್ಟಿಯಿಂದ ಗಂಭೀರ ಅಪಾಯಕಾರಿಯೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ನೀರಿನ ಗುಣಮಟ್ಟ ಹದಗೆಡುವುದಕ್ಕೆ ಕೊಳಚೆ ನೀರು ಸೋರಿಕೆ, ಕೈಗಾರಿಕಾ ತ್ಯಾಜ್ಯ ಮಿಶ್ರಣ, ಟ್ಯಾಂಕರ್ಗಳಲ್ಲಿ ಫಂಗಸ್ ಉತ್ಪತ್ತಿ ಹಾಗೂ ನೈಸರ್ಗಿಕ ಜಲಮೂಲಗಳ ಹಾನಿಯೇ ಪ್ರಮುಖ ಕಾರಣಗಳಾಗಿವೆ ಎಂದು ತಿಳಿದುಬಂದಿದೆ.
ಈ ಕುರಿತು ಜಲತಜ್ಞ ಟಿ.ವಿ. ರಾಮಚಂದ್ರ ಕಳವಳ ವ್ಯಕ್ತಪಡಿಸಿದ್ದು, ವೇಗವಾಗಿ ನಡೆಯುತ್ತಿರುವ ನಗರೀಕರಣದಿಂದ ನೈಸರ್ಗಿಕ ಜಲಸಂಪನ್ಮೂಲಗಳು ನಾಶವಾಗುತ್ತಿವೆ. ಕಾಂಕ್ರೀಟ್ ವಿಸ್ತರಣೆ ಹೆಚ್ಚುತ್ತಿರುವುದರಿಂದ ಭೂಗರ್ಭ ಜಲವೂ ಕಲುಷಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸುರಕ್ಷಿತ ಕುಡಿಯುವ ನೀರು ಒದಗಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಬೇಸಿಗೆ ಆರಂಭದ ಹೊತ್ತಲ್ಲೇ ಈ ವರದಿ ಹೊರಬಂದಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗೆ ತ್ವರಿತ ಕ್ರಮ ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
