
ರಾಜ್ಯ ಸರ್ಕಾರ ಹಾಗೂ ಕೆಪಿಎಸ್ ಸಿಗೆ ಕೆಎಟಿ ಯಿಂದ ನೋಟಿಸ್
ಬೆಂಗಳೂರು: ಕೆಎಎಸ್ನ 384 ಹುದ್ದೆಗಳ ಭರ್ತಿಗೆ ಕಳೆದ ಡಿ.29ರಂದು ನಡೆಸಲಾದ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ದೋಷಗಳಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಕೋರಿ ಹಲವು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಕ್ಕೆ ಕರ್ನಾಟಕ ಆಡಳಿತ
ನ್ಯಾಯಮಂಡಳಿ (ಕೆಎಟಿ) ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಕೃಷ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಯು ಕೆಎಟಿ ನ್ಯಾಯಾಂಗ ಸದಸ್ಯ ಎಸ್.ವೈ. ವಟವಟಿ ಮತ್ತು ಆಡಳಿತ ಸದಸ್ಯೆ ಡಾ. ಅಮಿತಾ ಪ್ರಸಾದ್ ಅವರಿದ್ದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಕೆಲಕಾಲ ವಾದ ಆಲಿಸಿದ ಪೀಠ, ಕೆಪಿಎಸ್ಸಿ ಅಭಿಪ್ರಾಯ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಆದರೆ, ಸರ್ಕಾರ ಮತ್ತು ಕೆಪಿಎಸ್ಸಿ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿತು. ಅಲ್ಲದೆ, ಮುಂದಿನ ವಿಚಾರಣೆವರೆಗೆ ಪರೀಕ್ಷೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೆಪಿಎಸ್ಸಿಗೆ ನಿರ್ದೇಶನ ನೀಡಿ ವಿಚಾರಣೆ ಜ.30ಕ್ಕೆ ಮುಂದೂಡಿತು.