ಹಾಸನ, ಡಿ.26: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ಗೆ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಅವರು ದಿನಾಂಕ 26.12.2025ರಂದು ಶುಕ್ರವಾರ ಅಧಿಕೃತ ಭೇಟಿ ನೀಡಿದರು. ಹಾಸನ ನಗರದ KIADB ವೃತ್ತದಲ್ಲಿರುವ ರೋಟರಿ ಸನ್ ರೈಸ್ ಭವನದಲ್ಲಿ ಈ ಕಾರ್ಯಕ್ರಮ ಜರುಗಿತು.
ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಅವರನ್ನು ಚನ್ನಪಟ್ಟಣ ವೃತ್ತದಲ್ಲಿ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿ ಕರೆತಂದರು. ಈ ಸಂದರ್ಭದಲ್ಲಿ ನವೀಕೃತಗೊಂಡ ರೋಟರಿ ಸನ್ ರೈಸ್ ಭವನವನ್ನು ಜಿಲ್ಲಾ ಗವರ್ನರ್ ಅವರು ಉದ್ಘಾಟಿಸಿದರು. ನಂತರ ಭವನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಟ್ಟಡದ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ನಂತರ ನಡೆದ ಕ್ಲಬ್ ಅಸೆಂಬ್ಲಿಯಲ್ಲಿ ಪಾಲ್ಗೊಂಡು, ಕ್ಲಬ್ನ ಕಾರ್ಯಚಟುವಟಿಕೆಗಳ ವಿವರಗಳನ್ನು ಪಡೆದು, ಕ್ಲಬ್ ಬಲವರ್ಧನೆಗಾಗಿ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ಅದೇ ದಿನ ಮಧ್ಯಾಹ್ನ ರೋಟರಿ ಸನ್ ರೈಸ್ ಕ್ಲಬ್ ವತಿಯಿಂದ ಹಾಸನ ತಾಲ್ಲೂಕಿನ ದೊಡ್ಡ ಬೀಕನಹಳ್ಳಿ ಗ್ರಾಮದ ಶ್ರೀ ಗಜಾನನ ಪ್ರೌಢಶಾಲೆಯಲ್ಲಿ ಸುಮಾರು ₹70 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯವನ್ನು ಜಿಲ್ಲಾ ಗವರ್ನರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿ, ರೋಟರಿ ಕ್ಲಬ್ನ ಸಮಾಜಮುಖಿ ಕಾರ್ಯಗಳ ಮಹತ್ವವನ್ನು ವಿವರಿಸಿದರು.

ಸಂಜೆ ವೇಳೆಗೆ ಸನ್ ರೈಸ್ ಭವನದಲ್ಲಿ ಸಾರ್ವಜನಿಕ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಅವರು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ನ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ರೋಟರಿ ಚಳವಳಿಯ ಉದ್ದೇಶಗಳು ಹಾಗೂ ಕಾರ್ಯವ್ಯಾಪ್ತಿಯ ಕುರಿತು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ್ ಜೆ.ಎನ್. ಮಂಜುನಾಥ್, ವಲಯ ಸೇನಾನಿ ಶಿವಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ನ ಅಧ್ಯಕ್ಷ ರೋ. ವಜ್ರಕುಮಾರ್ ಎಚ್.ಡಿ., ಕಾರ್ಯದರ್ಶಿ ರೋ. ಯೋಗೇಶ್ ಕೆ.ಎಸ್., ಖಜಾಂಚಿ ರೋ. ಗವಿಗೌಡ, ನಿರ್ದೇಶಕರುಗಳಾದ ರೋ. ಅಮೃತ್ ಕುಮಾರ್, ರೋ. ಕಿರಣ್, ರೋ. ರಾಜಣ್ಣ, ರೋ. ಸಿದ್ದನಂಜಪ್ಪ, ರೋ. ಭುವನೇಶ್, ರೋ. ಗುರುಮೂರ್ತಿ, ರೋ. ವಿಶ್ವನಾಥ್, ರೋ. ಶಶೀಂದ್ರನಾಥನ್, ರೋ. ದರ್ಶನ್, ರೋ. ಪರಮೇಶ್ ಸೇರಿದಂತೆ ಕ್ಲಬ್ನ ಇತರ ಸದಸ್ಯರು ಹಾಗೂ ರೋಟರಿ ಜಿಲ್ಲೆಯ ಅನೇಕ ಗಣ್ಯರು ಉಪಸ್ಥಿತರಿದ್ದರು.

[…] ಇದನ್ನು ಓದು: ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಅವರಿಂದ … […]