ತುಮಕೂರು:ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕುಣಿಗಲ್, ಗುಬ್ಬಿ, ಕೊರಟಗೆರೆ ಮತ್ತು ತುಮಕೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿ ಬಾಕಿ ಉಳಿದಿರುವ ಹಲವು ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಅಧಿಕಾರಿಗಳು ಸೇವಾ ಮನೋಭಾವದೊಂದಿಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು,ಜನರ ಸಮಸ್ಯೆಯನ್ನು ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರಕರಣ ವಿಲೇವಾರಿ ಮಾಡುತ್ತಿರುವ ಸಂದರ್ಭದಲ್ಲಿ
ಅಧಿಕಾರಿಗಳು ಸರಿಯಾದ ಉಡುಗೆ ಅನುಸರಿಸುವುದು ಅವರ ಶಿಸ್ತು ಮತ್ತು ಗೌರವದ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಸೂಚಿಸಿದರು.
ವಿಚಾರಣೆ ಸಂದರ್ಭದಲ್ಲಿ ಕೆಲವು ಪ್ರಕರಣಗಳು ಸ್ಥಳದಲ್ಲೇ ಪರಿಹರಿಸಬಹುದಾದ ಸಣ್ಣಪುಟ್ಟ ವಿಷಯಗಳಾಗಿದ್ದರೂ ಅವು ಲೋಕಾಯುಕ್ತದವರೆಗೆ ಬರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲೇ ಉದಾಸೀನತೆ ತೋರದೇ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಸೂಚಿಸಿದರು.

ಜನರು ಕೆಲವೊಮ್ಮೆ ಅಧಿಕಾರಿಗಳ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುವುದು ಕಂಡುಬಂದಿದೆ ಎಂದು ತಿಳಿಸಿದ ಅವರು, ಇಂತಹ ಪ್ರಕರಣಗಳನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸುಳ್ಳು ದೂರುಗಳನ್ನು ದಾಖಲಿಸುವವರ ವಿರುದ್ಧ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಬಾಕಿ ಪ್ರಕರಣಗಳ ವಿವರವಾದ ಪರಿಶೀಲನೆ, ಸಂಬಂಧಿಸಿದ ಇಲಾಖೆಗಳ ಸ್ಪಷ್ಟೀಕರಣ, ಮತ್ತು ತಕ್ಷಣ ವಿಲೇವಾರಿ ಮಾಡಬಹುದಾದ ಪ್ರಕರಣಗಳ ತ್ವರಿತ ಪರಿಹಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಲವು ಪ್ರಕರಣಗಳಲ್ಲಿ ಹಿರಿಯ ನಾಗರೀಕರು,ಅಂಗವಿಕಲರು,ಸಂಘ-ಸಂಸ್ಥೆಗಳು ಸಹ ದೂರನ್ನು ದಾಖಲಿಸಿ ಇಂದು ಹಾಜರಾಗಿದ್ದು ಕಂಡು ಬಂದಿತು,ಕೆಲವು ಸಾರ್ವಜನಿಕರು ಉಪಲೋಕಾಯುಕ್ತರನ್ನು ಭೇಟಿ ಮಾಡಿ ಶಾಲಾ ಕಾಂಪೌಂಡ್ ನಿರ್ಮಿಸಿಕೊಡುವಂತೆ,ಕೆರೆ ಒತ್ತುವರಿ ಬಿಡಿಸಿಕೊಡುವಂತೆ ಹೀಗೆ ನಾನಾ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದರು.ಇಂದು ಒಟ್ಟು 148 ಪ್ರಕರಣಗಳ ವಿಚಾರಣೆ ನಡೆಯಿತು.
ಈ ಸಂದರ್ಭದಲ್ಲಿ ಉಪರಿಜಿಸ್ಟ್ರಾರ್ ಎನ್.ವಿ.ಅರವಿಂದ್,ಎ.ಎಸ್.ಪಿ.ಪುರುಷೋತ್ತಮ್,ಎಡಿಸಿ ಡಾ||ಎನ್.ತಿಪ್ಪೇಸ್ವಾಮಿ,ಲೋಕಾಯುಕ್ತ ಎಸ್.ಪಿ.ಲಕ್ಷ್ಮೀನಾರಾಯಣ್ ಇತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
