ನೀವು ದಾರಿಯಲಿ ನಿಮ್ಮ ಪಾಡಿಗೆ ಹೋಗ್ತಿರ್ತೀರಿ. ಎದುರಿಗೊಬ್ಬ ಬಂದು ಅಡ್ಡ ನಿಂತ. ನೀವು ಪಕ್ಕಕ್ಕೆ ಸರಿದಿರಿ, ಅಲ್ಲಿಗೂ ಅಡ್ಡ ಬಂದ. ಎಲಾ ಇವ್ನಾ ಎಂದುಕೊಂಡ ನೀವು ಎಡಕ್ಕೆ ತಿರುಗಿದರೆ ಮತ್ತೊಬ್ಬ ಕಾಲ್ಕಿಸಿದುಕೊಂಡು ಎದುರಿಗೆ ನಿಂತ. ಬಲಕ್ಕೆ ತಿರುಗಿದಿರಿ ಇನ್ನಾವನೋ ಒಬ್ಬ ಕಬಡ್ಡಿಯಲಿ ದಾಳಿ ಮಾಡುವವ ಅಟ್ಟಾಡಿಸುವವನಂತೆ ಸುಗ್ಗಿ ಕುಣಿತ ಆರಂಭಿಸಿದ. ಹಿಂದಕ್ಕಾದರೂ ವಾಪಾಸ್ ಹೋಗೋಣವೆಂದರೆ ಮೂರ್ನಾಲ್ಕು ಕಿರಾತಕರ ಗುಂಪೊಂದು ಬೆರೆಸಾಡತೊಡಗಿದರೆ ನೀವೇನು ಮಾಡ್ತೀರಿ? ಸಂದಿಯಲಿ ನುಗ್ಗಿ ಓಡಲು ಪ್ರಯತ್ನಿಸಿತೀರಿ. ಆ ಗಾಬರಿ ಗೊಂದಲದಲಿ ನೀವು ಬೀಳಬಹುದು ಇಲ್ಲವೇ ನಿಮಗೆದುರು ಬಂದವರನು ತಳ್ಳಿ ಬೀಳಿಸಬಹುದು. ನಿಮಗೆ ತಾಕತ್ತು, ಧೈರ್ಯವಿದ್ದರೆ ‘ಬನ್ನಿ ನನ ಮಕ್ಕಳಾ’ಎಂದು ನೀವೂ ಅಟ್ಚಾಡಿಸಬಹುದು.
ಈ ನಾಯಿ-ಮೂಳೆಯಾಟದಲಿ ನೆಲಕ್ಕೊಂದಷ್ಟು, ನೆಲದ ಮೇಲಿನ ಗಿಡಗಳಿಗೊಂದಷ್ಟು ಹಾನಿಯಾಗುವುದು ಸಹಜ. ನಿಮ್ಮನ್ನು ನಿಮ್ಮ ಪಾಡಿಗೆ ಹಾದು ಹೋಗಲು ಬಿಟ್ಟಿದ್ದರೆ, ಅವರೂ ಸೇಫ್, ನೀವೂ ಸೇಫ್.
ವನ್ಯ ಜೀವಿಗಳ ವಿಚಾರದಲ್ಲಿಯೂ ಹೀಗೇ ಆಗುತ್ತಿದೆ. ಅವುಗಳ ಆವಾಸ ಪ್ರದೇಶದಲಿ ನಾವು ಅತಿಕ್ರಮ ಮಾಡಿದ್ದೇವೆ. ಅವು ಬಂದರೆ ಹೆಚ್ಚೆಂದರೆ ಎರಡು ಹಲಸಿನ ಕಾಯಿ, ನಾಲ್ಕು ಬಾಳೆ ಕಂದು, ಇದ್ದರೆೆ ಎರಡು ಬೈನೇ ಕಂದು ತಿಂದು ಹೋಗಬಹುದು. ಇಷ್ಟರಿಂದ ಯಾರ ಮನೆಯೂ ಹಾಳಾಗಲ್ಲ. ಈ ತೋಟದಲ್ಲಿವೆ ಎಂದು ಆ ಊರಿನವರು ಪಟಾಕಿಗಳ ಹೊಡೆದು ಗಾಬರಿ ಮಾಡುವುದು. ಆ ಊರಿನಲ್ಲಿವೆ ಎಂದು ಈ ಊರಿನವರು ತಗಡಿನ ಡಬರಿ ಬಡಿಯುವುದು. ಪುಗಸಟ್ಟೆ ಮನರಂಜನೆ ಸಿಗುತ್ತೆ ಎಂದು ಭರ್ರ್ ಭರ್ರೆಂದು ವಾಹನಗಳನು ರ್ಯಾಂಬೋ ಲುಕ್ಕಿನಲಿ ಓಡಿಸುವುದು. ತಾನೊಬ್ಬ ಜಿಮ್ ಕಾರ್ಬೆಟ್ ಎನ್ನುವಂತೆ ಬಂದೂಕು ಝಳಪಿಸುವುದು. ಕಾಡು ಪ್ರಾಣಿಗಳೂ ನಾಚುವಂತೆ ವಿಕಾರವಾಗಿ ಕೂಗುತ್ತಾ ಅಬ್ಬರಿಸುವುದು. ಈ ಮಂಗಾಟಗಳಿಂದ ಇನ್ನೂ ಗೊಂದಲಕ್ಕೊಳಗಾಗಿ ಆತಂಕಗೊಳ್ಳುವ ಪ್ರಾಣಿಗಳು ಅತ್ತಿತ್ತ ಚಲಿಸಿ ಪರೋಕ್ಷವಾಗಿ ಗಿಡಗಳಿಗೆ ಹಾನಿ ಮಾಡಬಹುದು. ಅವುಗಳನು ಅವುಗಳ ಪಾಡಿಗೆ ತಿರುಗಾಡಲು ಬಿಡಿ. ನಮ್ಮ-ನಿಮ್ಮಂತೆಯೇ ಪ್ರಾಣಿಗಳೂ ಬದುಕಲು ಅರ್ಹ ಹಾಗೂ ಮನುಷ್ಯನಿಗಿಂತಲೂ ಹೆಚ್ಚು ಅರ್ಹ ಎಂಬುದನ್ನ ಒಪ್ಪಿಕೊಳ್ಳೋಣ.
………………….

ತಾನೇತಾನಾಗಿ ಆನೆ ಯಾರನ್ನೂ ಅಟ್ಟಾಡಿಸಲ್ಲ. ಜನರೇ ಗಾಬರಿಗೊಂಡು, ಆನೆಯನೂ ಗಲಿಬಿಲಿಗೊಳಿಸಿ ಗದ್ದಲವೆಬ್ಬಿಸುತ್ತಾರೆ. ಅದು ಅದರ ಪಾಡಿಗೆ ಹೋಗುತ್ತಿರುವಾಗ ಜನರೇ ಗುಲ್ಲೆಬ್ಬಿಸಿ ಆನೆಯನ್ನೇ ಗಾಬರಿಗೊಳಿಸುತ್ತಾರೆ. ವನ್ಯಜೀವಿಗಳೊಂದಿಗೆ ಹೇಗೆ ವರ್ತಿಸಬೇಕೆಂಬುದನು ಜನರಿಗೆ ಹೇಳಿಕೊಡಬೇಕಿದೆ. ಅವುಗಳ ಪಾಡಿಗೆ ಅವನ್ನ ಬಿಟ್ಟರೆ, ಪ್ರಚೋದಿಸದಿದ್ದರೆ ಅವು ನಮ್ಮ ತಂಟೆಗೆ ಖಂಡಿತಾ ಬರುವುದಿಲ್ಲ. ಯಾವುದೇ ವನ್ಯಜೀವಿ ತನ್ನ ಕನಿಷ್ಠ ಅಗತ್ಯವನು ಮೀರಿ ಬದುಕಲಾರದು. ಮುಂದಿನ ಹೆಜ್ಜೆ ಇಡಲಾರದಾಗ ಇಲ್ಲವೇ ಹಿಂದಕೆ ಚಲಿಸಲಾಗದಾಗ ಮಾತ್ರ ಅಸಹಾಯರಾಗಿ ಇದ್ದಲ್ಲಿಯೇ ಸುಳಿದಾಡಲಾರಂಭಿಸುತ್ತವೆ. ಆ ಬಂಧನದ ಕಾರಣದಿಂದಲೇ ಚಡಪಡಿಸುತ್ತವೆ ಜೊತೆಗೆ ಭಯವಿಹ್ವಲರಾಗಿ ಆ ಉಸಿರುಗಟ್ಟಿಸುವ ಸನ್ನಿವೇಶದಿಂದ ಪಾರಾಗಲು ಎಲ್ಲಾ ದಿಕ್ಕುಗಳಲಿ ಪ್ರಯತ್ನಿಸುತ್ತವೆ. ಅದು ಇರುವೆಯಾಗಿರಬಹುದು ಇಲ್ಲವೇ ಆನೆಯಾಗಿರಬಹುದು ಇಲ್ಲವೇ ಹಾವಾಗಿರಬಹುದು ಇಲ್ಲವೇ ಹಕ್ಕಿಯಾಗಿರಬಹುದು. ಈ ಸಾಮಾನ್ಯ ಪ್ರಜ್ಞೆಯನು ಮನವರಿಕೆ ಮಾಡಿಕೊಂಡರೆ ಸಾಕು ಶಾಂತಿಯುತ ಸಹಬಾಳ್ವೆ ಸಾಧ್ಯವಿದೆ. ಈ ಏಕೈಕ ಭೂಮಿ ಮನುಷ್ಯನಿಗೆ ಮಾತ್ರವಲ್ಲ. …………………..
ನಮ್ಮ ತೋಟದ ಗೇಟಿಗೆ ಸ್ವಲ್ಪವೂ ಹಾನಿಯಾಗದಂತೆ ಪಕ್ಕಕ್ಕೆ ಎತ್ತಿಟ್ಟು ಗಂಭೀರವಾಗಿ ಬಂದು, ಆತಿಥ್ಯ ಸ್ವೀಕರಿಸಿ, ಗೌರವದಿಂದಲೇ ಹೋದ ಗಜರಾಜ.😌 ಆನೆಗಳು ಮೂಲತಃ ಸಂಚಾರಿ ಜೀವಿಗಳು. ಸಮೃದ್ಧ, ವಿಫುಲವಾಗಿದ್ದ ಹಾಗೂ ಪ್ರಾಣಿ ಸಂಕುಲಕ್ಕೆ ವಿಸ್ತಾರವಾಗಿದ್ದ ಈ ಭೂಮಿಯ ಮೇಲೆ ವಿಕಾಸದ ಹಾದಿಯಲಿ ಮಿಲಿಯಾಂತರ ವರುಷಗಳಿಂದ ತನ್ನ ಆಹಾರಕ್ರಮ ಮತ್ತು ಸ್ವಭಾವವನು ರೂಪಿಸಿಕೊಂಡು ಬಂದಿವೆ. ಇವು ತಮ್ಮ ನೀರು-ಆಹಾರದ ಅಗತ್ಯ ಮತ್ತು ಸಂತಾನಾಭಿವೃದ್ಧಿಯ ಮೂಲ ಲಕ್ಷಣದ ಕಾರಣಕ್ಕೆ ಒಂದು ಬಿಡಾರದಿಂದ ಇನ್ನೊಂದು ಬಿಡಾರಕ್ಕೆ ನಿರಂತರವಾಗಿ ಸಂಚರಿಸುತ್ತಲೇ ಇರುತ್ತವೆ.
ನಾವು ನಮ್ಮ ವಸತಿ, ಕೃಷಿ, ಸಂಚಾರ, ಪ್ರವಾಸೋದ್ಯಮ ಮುಂತಾದ ಹೆಸರಿನಲಿ ಆನೆಗಳ ಸರಾಗ ಓಡಾಟಕ್ಕೆ ಅಡೆತಡೆಗಳನು ನಿರ್ಮಿಸಿದ್ದೇವೆ. ಇದು ಮಾನವ-ವನ್ಯಜೀವಿ ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗಿದೆ. ತನಗೆ ಘಾಸಿ ಮಾಡುವುದಿಲ್ಲ ಎಂದು ಖಚಿತವಾದರೆ ಯಾವುದೇ ವನ್ಯಜೀವಿ ಮನುಷ್ಯನ ಮೇಲೆ ನುಗ್ಗಿ ಬರುವುದಿಲ್ಲ. ಅವುಗಳನು ಅವುಗಳ ಪಾಡಿಗೆ ಬಿಟ್ಟುಬಿಡುವದು ಅತ್ಯಂತ ಸಮಂಜಸ ಮತ್ತು ಸಮಯೋಚಿತ ಪರಿಹಾರ. ಸಹಬಾಳ್ವೆಯೆಂಬುದು ಹೇಗೆ ಮನುಷ್ಯ ಜಗತ್ತಿನ ಅಗತ್ಯವೋ ಹಾಗೆಯೇ ಜೀವ ಜಗತ್ತಿನ ಅನಿವಾರ್ಯತೆಯೂ ಹೌದು.

ಈಗ್ಗೆ ಕೆಲ ವರ್ಷಗಳ ಹಿಂದೆ ನಮ್ಮದೇ ತೋಟಕ್ಕೆ ಬಂದಿದ್ದ ಆನೆಯೊಂದು ತಾನು ಸುಮ್ಮನೇ ಸೊಂಡಿಲಿನಲಿ ತಳ್ಳಿದ್ದರೂ ಸಾಕು ಮುರಿದು ಬೀಳಬಹುದಾದ ಕಬ್ಬಿಣದ ಗೇಟನ್ನು ಆಧಾರ ಕಂಬದ ಕೊಕ್ಕೆಯಿಂದ ಮೃದುವಾಗಿ ಎತ್ತಿ, ತಾನು ದಾಟಿ ಹೋಗಲು ಅಗತ್ಯವಿದ್ದಷ್ಚು ಜಾಗವನ್ನು ಮಾತ್ರ ಸೃಷ್ಠಿಸಿಕೊಂಡು ತೋಟದೊಳಗೆ ಹರಿಯುತಿದ್ದ ತೊರೆಯಲ್ಲಿ ನೀರು ಕುಡಿದು ಆಚೆಬದಿಯ ಬೇಲಿಗೆ ಸಹ ಕೊಂಚವೂ ಹಾನಿ ಮಾಡದೇ ಹೊರಟು ಹೋಗಿದೆ.
ಹಸಿವಿದ್ದಿದ್ದರೆ ಅವಷ್ಚಕ್ಕೆ ಅವೇ ಮೊಳಕೆಯೊಡೆದು ಬೆಳೆಯುವ ಬಾಳೆ ಗಿಡದ ಮೂರ್ನಾಲ್ಕು ಕಂದುಗಳನು ತಿನ್ನುತಿತ್ತೇನೋ? ತಿಂದಿದ್ದರೆ ಯಾರ ಮನೆಯೂ ಹಾಳಾಗುತ್ತಿರಲಿಲ್ಲ. ಆನೆ ಬಂದಿದೆ ಎಂದು ನಾವು ಸುತ್ತಮುತ್ತಲಿನ ತೋಟದವರಿಗೆ ಕರೆಮಾಡಿ ಗುಲ್ಲೆಬ್ಬಿಸಿ, ಗುಂಡು ಹಾರಿಸಿ, ಅರಣ್ಯ ಇಲಾಖೆಯವರನು ಕರೆಸಿ ಅವರು ಬಂದು ಪಟಾಕಿ ಹೊಡೆದಿದ್ದರೆ, ಸುತ್ತಮುತ್ತಲಿನ ತೋಟದವರು ತಮ್ಮಗಳ ತೋಟಕ್ಕೆ ದಾಟದಂತೆ ತಡೆಯೊಡ್ಡಿದ್ದರೆ, ಆ ಆನೆ ಮಾಡಬಹುದಾದ ದಾಂಧಲೆ, ಹಾನಿ ಮತ್ತು ತೋರಬಹುದಾಗಿದ್ದ ಪ್ರತಿರೋಧ ಅಲ್ಲದೇ ಮನುಷ್ಯನೆಡೆಗಿನ ಅದಕ್ಕೆ ಮೂಡಬಹುದಾಗಿದ್ದ ಅಭಿಪ್ರಾಯವನು ಕಲ್ಪಿಸಿಕೊಳ್ಳಿ. ನಮ್ಮ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಅಷ್ಟೇ.
ವನ್ಯಜೀವಿಗಳಿಗೆ ಅಗತ್ಯ ಆಹಾರ ಸಿಗುವಂತೆ ಕಾಡಿನ ಕೋರ್ ಏರಿಯಾದಲ್ಲಿ ಬೈನೆ, ಬಿದಿರು, ಬಾಳೆ, ಹಲಸು ಮುಂತಾದುವು ಯಥೇಚ್ಛವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇಲಾಖೆಯ ಕಡೆಯಿಂದ “ಆನೆಗಳ ಸಂತಾನ ಶಕ್ತಿ ಹರಣ” ಮಾಡುವ ಯೋಜನೆಯನು ಈ ಕೂಡಲೇ ದಾರಿ ಮಾಡಬೇಕಿದೆ.
ಅವುಗಳನ್ನ ಅವುಗಳ ಪಾಡಿಗೆ ಬಿಟ್ಟರೆ, ಯಾರಿಗೂ ತೊಂದರೆ ಕೊಡದೇ, ಯಾವುದೇ ಹಾನಿ ಮಾಡದೇ ಹೋಗುತ್ತವೆ.
ಅತ್ತ ಕಡೆಯಿಂದ ಆ ಊರಿನವರು- ಈ ಕಡೆಯಿಂದ ಈ ಊರಿನವರು ಕೇಕೆ ಹಾಕಿ, ಪಟಾಕಿ ಹೊಡೆದು ಗದ್ದಲ ಮಾಡಿದರೆ; ಅವು ಗಾಬರಿಗೊಂಡು ಎತ್ತಲೂ ಹೋಗಲಾಗದೇ ಸಿಕ್ಕಸಿಕ್ಕಲ್ಲಿ ನುಗ್ಗಿ ಜನ-ಜಾನುವಾರು-ಆಸ್ತಿಗೆ ಹಾನಿ ಮಾಡುತ್ತವೆ.
ಬಹುತೇಕ ಹಾನಿಗೆ ಮನುಷ್ಯನ ಅನಗತ್ಯ-ಅತಿರೇಕದ ಪ್ರತಿಕ್ರಿಯೆಯೇ ಕಾರಣ.
ಅವುಗಳ ಆಹಾರ-ಆವಾಸವನು ಕಿತ್ತುಕೊಂಡು ಬೀದಿಪಾಲು ಮಾಡಿದವರು ಯಾರು??
……………………………………ಜೀವಾಳ.

