ಬೆಂಗಳೂರು: ಮನೆ, ಅಪಾರ್ಟ್ಮೆಂಟ್ ಅಥವಾ ಯಾವುದೇ ವಸತಿ ಸಂಕೀರ್ಣ ನಿರ್ಮಾಣದ ಕಾರಣಕ್ಕೆ ಒಮ್ಮೆ ಇಡೀ ಪ್ರದೇಶದ ಮಾರಾಟದ ಕುರಿತು ಕ್ರಯಪತ್ರ (Sales deed) ಮಾಡಿಕೊಂಡ ನಂತರ ಭೂ ಮಾಲೀಕರು ಅದರಲ್ಲಿ ಅಲ್ಪ ಭಾಗವನ್ನು ಉಳಿಸಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್ (Highcourt) ಮಹತ್ವದ ಆದೇಶ ನೀಡಿದೆ.
ಈ ಕುರಿತು ಕೀರ್ತಿ ಹಾರ್ಮೋನಿ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ನವರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಇದೀಗ ವಿಚಾರಣೆಯ ನಂತರ ಈ ಅರ್ಜಿಯನ್ನು ನ್ಯಾಯಾಲಯ ಮಾನ್ಯಗೊಳಿಸಿದ್ದು, ವಸತಿ ಸಂಕೀರ್ಣ ನಿರ್ಮಾಣಕ್ಕೆ ಹನುಮಂತರೆಡ್ಡಿ ಎಂಬುವರಿಗೆ ಬಿಬಿಎಂಪಿ ಮಂಜೂರು ಮಾಡಿದ್ದ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ.
ಕರ್ನಾಟಕ ಓನರ್ಶಿಪ್ ಫ್ಲಾಟ್ಸ್ (ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ಹಸ್ತಾಂತರ ನಿಯಂತ್ರಣ) ಕಾಯಿದೆ- 1972ರ ಪ್ರಕಾರ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಖರೀದಿಗೆ ಒಪ್ಪಿರುವ ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ.
ಬಿಡಿಎ ಅನುಮೋದನೆ 2007ರ ಅನ್ವಯ, ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ಮಳೆ ನೀರು ಕೊಯ್ಲು ಹಾಗೂ ಎಸ್ಟಿಪಿ ನಿರ್ಮಾಣ ಮಾಡಬೇಕು.ಆದರೆ, ಬಿಲ್ಡರ್ ಅದನ್ನು ಬದಲಾವಣೆ ಮಾಡಲಾಗದು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿರುವ ನ್ಯಾಯಾಲಯ ಒಂದು ವೇಳೆ ಯೋಜನಾ ಪ್ರಾಧಿಕಾರ ಮಳೆ ನೀರು ಕೊಯ್ಲು ಮತ್ತು ಎಸ್ಟಿಪಿ ಜಾಗ ಬದಲಾವಣೆಗೆ ಒಪ್ಪಿಕೊಂಡರೂ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ಗಳನ್ನು ಖರೀದಿ ಮಾಡಲು ಒಪ್ಪಿಕೊಂಡಿರುವವರ ಒಪ್ಪಿಗೆ ಪಡೆಯಬೇಕು ಎಂದು ಆದೇಶ ನೀಡಿದೆ.
ಈ ಅರ್ಜಿಯ ವಿಚಾರಣೆಯ ವೇಳೆ ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಕಾಯಿದೆ – 1972 ಬಗ್ಗೆ ಉಲ್ಲೇಖಿಸಿರುವ ನ್ಯಾಯಪೀಠ, ‘ಡೀಡ್ ಆಫ್ ಡಿಕ್ಲರೇಷನ್ ಅನ್ನು ಅಪಾರ್ಟ್ಮೆಂಟ್ ಮಾಲೀಕರು ಜಾರಿಗೊಳಿಸಿದ್ದಾರೆ. ಕಾಮನ್ ಏರಿಯಾ ಅಂದ್ರೆ, ಅದರ ಮೇಲೆ ಎಲ್ಲರ ಹಕ್ಕಿರಲಿದೆ. ಹೀಗಾಗಿ ಇಡೀ ಕಟ್ಟಡದ ಪ್ರದೇಶ ಕಾಮನ್ ಏರಿಯಾ ಆಗುತ್ತದೆ ಎಂದು ಕೋರ್ಟ್ ಹೇಳಿದೆ.
