ನಾನು ಹಲವಾರು ಬಾರಿ ಭಾರತೀಯ ಮಾನಸಿಕ ಆರೋಗ್ಯ ಸಂಘ ಏರ್ಪಡಿಸುವ ಸಮ್ಮೇಳನಗಳಿಗೆ ಹೋಗಿದ್ದೇನೆ. ಇತ್ತೀಚೆಗಷ್ಟೇ ಇಂತಹ ಸಮ್ಮೇಳನಗಳಲ್ಲಿ ನನಗೆ ಒಂದು ವಾಕ್ಯಾಂಶ ನನ್ನ ಕಿವಿಗೆ ಬಿತ್ತು. ಆ ಪದಗುಚ್ಛ “ಔಟ್ ಆಫ್ ದ ಬಾಕ್ಸ್ ತಿಂಕಿಂಗ್”. ನನ್ನ ಜ್ಞಾನ ಸುಮಾರು ನಲವತ್ತು ವರ್ಷಗಳ ಹಿಂದಿನ ಜ್ಞಾನ. ಪ್ರಪಂಚ ಎಂದಿಗೂ ಕ್ರಿಯಾಶೀಲತೆಯ ಕಡೆ ಇರುತ್ತದೆ. ಹಾಗೇ ಮಾನವನ ಯೋಚನೆಯೂ ಕೂಡ. ಮೊದಮೊದಲು ಈ ವಾಕ್ಯಂಶ ನನಗೆ ಅರ್ಥವಾಗಲಿಲ್ಲ. ಕೊನೆಗೂ ಇದರ ಅರ್ಥ ತಿಳಿದು ಕೊಂಡೆ. ಈ ವಿಚಾರವನ್ನು ಸುಲಭವಾಗಿ ತಿಳಿಸಬೇಕೆಂದರೆ “ಕೂಪಮಂಡೂಕನಾಗಬೇಡ, ಹೊರ ಬಂದು ಯೋಚನೆ ಮಾಡು” ಅಥವ “ನಿನ್ನ ಚೌಕಟ್ಟಿನಿಂದ ಹೊರಗೆ ಬಂದು ಯೋಜನೆ ಮಾಡು”. ಈಗ ಬಿಡಿ, ಇಂಗ್ಲಿಷ್ನಲ್ಲಿ ತರ ತರಹದ ಪದ ಅಥವ ವಾಕ್ಯಾಂಶಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ ನಾವು ಹಿಂದೆ ಶಸ್ತ್ರ ಚಿಕಿತ್ಸಾ ಕೊಠಡಿಗೆ ಹೋಗುವ ಮುನ್ನ ‘ರೋಗಿ ಒಳಗೆ ಹೋದರು’ ಎಂದು ಹೇಳುತ್ತಿದ್ದವು. ಈಗ ‘ಸ್ಟ್ರೆಚರ್ ಇನ್’, ಆಪರೇಷನ್ ಆದ ಮೇಲೆ ‘ಸ್ಟ್ರೆಚರ್ ಔಟ್’ ಎಂದು ಹೇಳುತ್ತಾರೆ. ಈ ಔಟ್ ಆಫ್ ದ ಬಾಕ್ಸ್ ತಿಂಕಿಂಗ್ ಅನ್ನು ‘ಕಪ್ಪೆ ತರ ಇರೋದು ಬೇಡ’ ಎಂದು ಹೇಳಿದ್ದರೆ ಸಾಕಾಗಿತ್ತು. ಆದರೆ ಇಂಗ್ಲಿಷ್ನಲ್ಲಿ ‘ಡೋಂಟ್ ಬಿ ಎ ಫ್ರಾಗ್’ ಎಂದರೆ ಬೈದಂಗೆ ಆಗಲಿಲ್ಲವೆ. ಇರಲಿ ಬಿಡಿ. ಈಗ ಈ ಪದ ಗುಚ್ಛದ ಬಗ್ಗೆ ತಿಳಿದುಕೊಳ್ಳೋಣ.
ಸಾಮನ್ಯವಾಗಿ ಜನರೆಲ್ಲರು ಒಂದೇ ತರಹ ಯೋಚನೆ ಮಾಡುತ್ತಿರುತ್ತಾರೆ. ಈ ಯೋಚನೆಗಳು ತಮ್ಮ ವೈಯುಕ್ತಿಕ ಶ್ರೇಷ್ಠ ಬದುಕಿಗೆ, ಎಷ್ಟು ಮಾಡಿದರು ತೃಪ್ತಿಯ ಕೊರತೆ. ತೃಪ್ತಿಯನ್ನು ಕಂಡುಕೊಳ್ಳುವರಿಗೆ ಅಲ್ಪ ಪರರ ಚಿಂತೆ ಅಥವ ಯೋಚನೆ. ಹೀಗಿರುವಾಗ ‘ಔಟ್ ಆಫ್ ದ ಬಾಕ್ಸ್ ತಿಂಕಿಂಗ್’ ಎಂತಾದ್ದು? ಕಲ್ಪನೆ ಅಂಬೋಣವೆ. ಕಲ್ಪನೆಯನ್ನು ಇಂಗ್ಲಿಷಿನಲ್ಲಿ ‘ಐಡಿಯಾ’ ಎಂದು ಕರೆಯುತ್ತಾರೆ. ಈ ಕಲ್ಪನಾ ಯೋಚನೆ ಎಂತಾದ್ದು? ಇದು ಫಿಕ್ಷನ್ನಾ, ತಾರ್ಕಿಕವ, ಅನ್ವೇಷಣೆಯೆ, ವೈಜ್ಞಾನಿಕ ಸಿದ್ದಾಂತವ, ಸಾಮಾಜಿಕ ಕಳಕಳಿಯೆ, ತಂತ್ರಜ್ಞಾನ ಅಥವ ಜೈವಿಕ ತಂತ್ರಜ್ಞಾನವೆ, ಹಣ ದುಪ್ಪಟ್ಟು ಮಾಡುವ ವಿಚಾರವೆ, ಯಾರನ್ನಾದರೂ ಯಾಮಾರಿಸುವ ವಿಧಾನವೆ… ಇತ್ಯಾದಿ. ಈ ಐಡಿಯಾ ಯಾವುದಾದರೂ ಇರಬಹುದು ಆದರೆ ಈ ಕಲ್ಪನೆಯ ಉಪಯೋಗದಿಂದ ಲೋಕ ಕಲ್ಯಾಣ ಮತ್ತು ಸಾಮಾಜಿಕ ನಂಟು ಇದ್ದರೆ ಈ ವಾಕ್ಯಂಶಕ್ಕೆ ಪೂರ್ಣ ಅರ್ಥ ಸಿಗುವುದಂತಾಗಬಹುದು.
ನಾನು ನನ್ನ ಕಾರ್ಯನಿರ್ವಾಹಣೆಯನ್ನು ಬಿಟ್ಟು ಆಲೋಚನಾ ಲಹರಿಯಲ್ಲಿ ಮಿಂದಾಗ ನನಗೂ ಸಹ ‘ಔಟ್ ಆಫ್ ದ ಬಾಕ್ಸ ತಿಂಕಿಂಗ್’ ಬಂದಿತ್ತು. ನನ್ನ ಈ ಕಲ್ಪನೆ ಸಮಾಜಕ್ಕೆ ಎಷ್ಟು ಒಳ್ಳೆಯದನ್ನು ಮಾಡೀತು ಅಥವ ಲೋಕ ಕಲ್ಯಾಣಕ್ಕೆ ಪೂರಕವಾಗಹುದು ಎನ್ನುವುದು ಪ್ರಶ್ನಾತೀತ. ಆದರೇ ಇದೇ ಯೋಚನಾ ಲಹರಿಯಲ್ಲಿ ನನ್ನ ಒಂದು ಪುಸ್ತಕಕ್ಕೆ ಲೇಖಕನಾದೆ. ಈ ಪುಸ್ತಕದ ಹೆಸರು “ಪರಾತ್ಮ ಆ ಅಂತರ”. ಓದುವಾಗ ಎಲ್ಲರೂ ಪರಾತ್ಮವನ್ನು ಪರಮಾತ್ಮ ಎಂದು ಓದುತ್ತಾರೆ. “ಪರಾತ್ಮ” ಪದ ಶ್ರೀಮತ್ ರಾಮಾನುಜರ ಧನ್ಯಾಷ್ಟಕಮ್, ಇಲ್ಲಿ ಮಾತ್ರ ಓದಲು ಸಿಗುವುದು. ಪರಾತ್ಮ ಎಂಬುದು ‘ಪರ ಹಿತ ಚಿಂತನೆ’. “ಆ” ಎಂದರೆ ಅದು ಅಥವ ಇಂಗ್ಲಿಷಲ್ಲಿ ‘ದಟ್’ ಎಂದರ್ಥ. “ಅಂತರ” ಎಂದರೆ “ಆತ್ಮಗಳ ಮಧ್ಯೆ ಇರುವ ಜಗ ಅಥವ ಜಗತ್ತು”. ಅಂದರೆ ‘ಸ್ಪೇಸ್’. ನಾ ಹೇಳಿದ ಜಗತ್ತಿನಲ್ಲಿ ಆತ್ಮಗಳ ನಡುವೆ ಆಗುವಂತಹ ಜ್ಞಾನ ಸಂವೇದನೆ ಅಥವ ಸಂಹಾವನ ಕುರಿತಂತೆ ಲೇಖಕರಿಸಿದ ಪುಸ್ತಕ ನನ್ನದು.

“ತಂತ್ರ” ದ ಮೂಲ ಅರ್ಥ “ಆತ್ಮವನ್ನು ಹಿಗ್ಗಿಸು”. ಹಿಂದು ಧರ್ಮ ಗ್ರಂಥಗಳಲ್ಲಿ ತಂತ್ರ ವಿಚಾರವಾಗಿ ಸಾಕಷ್ಷು ನಿರೂಪಣೆ ಉಲ್ಲೇಖಿಸಿರುವುದನ್ನು ಓದಬಹುದು. ತಂತ್ರ ಎಂದಾಕ್ಷಣ ಮಂತ್ರ ಪಠಣ ಮತ್ತು ಆಚಾರಗಳ ಕ್ರಿಯೆ. ಚಾಚು ತಪ್ಪದೆ ಇವುಗಳನ್ನು ನೆರವೇರಿಸಿದರೆ ಧನ ಲಾಭ, ಬಲ, ವಶೀಕರಣ, ಕಾಮಾಸಕ್ತಿ, ಶತ್ರು ನಾಶ, ಮಾಟ ಮಂತ್ರ, ಯಕ್ಷಿಣಿ ಅಹ್ವಾಹಣೆ, ಐಂದ್ರ ಜಾಲ ಕಲಿಕೆ ಇತ್ಯಾದಿಗಳೆಲ್ಲವನ್ನು ಪಡೆಯಬಹುದು ಎಂಬುದನ್ನು ತಿಳಿಸಲಾಗಿದೆ. ನಾನೊಬ್ಬ ಮನೋವೈದ್ಯನಾದ್ದರಿಂದ ಇವುಗಳನ್ನೆಲ್ಲಾ ಬದಿಗೆ ತಳ್ಳಿ ನನ್ನದೇ ಆದ ತಾರ್ಕಿಕ ವಿಚಾರವನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡಿದ್ದೇನೆ. ಈ ವಿಷಯವಾಗಿ ಕೆಲವು ಲೇಖನಗಳನ್ನು ತರುವ ಉದ್ದೇಶ ನನ್ನದು.
“ತಂತ್ರ” ಸಮೀಕರಣದ ಉತ್ಪನ್ನ. ಇದರ ಲಘು ಗಣಿತ “ಯಂತ್ರ + ಮಂತ್ರ = ತಂತ್ರ”. ಈ ವಿಷಯ ತಿಳಿಸುವ ಮುನ್ನ ‘ಅಂತರ’ ದ ಸಾರವನ್ನು ತಿಳಿಸುವ ಪ್ರಯತ್ನ ಮಾಡುವೆ. ನಮ್ಮ ನಡುವೆ ಕಾಣದೆ ಇರುವ ಮತ್ತು ಕಾಣುವ ವಸ್ತುಗಳು ವ್ಯರ್ಥವಲ್ಲ. ಉದಾಹರಣೆಗೆ, ಮಣ್ಣು (ಸಿಲಿಕಾ) ಇಂದು ಆಪ್ಟಿಕಲ್ ಫೈಬರ್ ಆಗಿ ಪರಿವರ್ತನೆ ಆಗಿದೆ, ಹಾಗೆಯೇ ಕಾಣದೇ ಇರುವ ಕೆಲವು ಅಣು ಜೀವಿಗಳು ನಮ್ಮ ಪಚನ ಕ್ರಿಯೆಯಲ್ಲಿ ಸಹ ಜೀವನ ವಹಿಸುತ್ತವೆ. ‘ತಂತ್ರ’ ದ ಮುಖ್ಯ ಸಾರ ಸಹಭಾಗತ್ವ ಮತ್ತು ಸಮಾನಾಂತರ ತತ್ವಗಳ ಅನಾವರಣಗಳು. ತಂತ್ರದ ಗ್ರಂಥಗಳಲ್ಲಿ ಈ ವಿಷಯಗಳನ್ನು ಗೂಢಲಿಪೀಕರಣ ಮಾಡಲಾಗಿವೆ. ಉದಾಹರಣೆಗೆ ತಂತ್ರಜ್ಞಾನದಲ್ಲಿ ಸಿಲಿಕಾನ್ ಚಿಪ್ ಅಥವ ಬಿಲ್ಲೆಗಳಲ್ಲಿ (ಹಾರ್ಡ ವೇರ್) ಯಾವ ತರಹ ಗೂಢಲಿಪೀಕರಣ (ಸಾಫ್ಟ್ ವೇರ್) ದಾಖಲಿಸುರುತ್ತಾರೋ ಹಾಗೆ ಚೀನಾದ ಕನ್ಫ್ಯೂಸಿಯಸ್ ಧರ್ಮ ಗ್ರಂಥಗಳಲ್ಲಿ ನಿಶ್ಚಿತವಾದ ಮಾದರಿಯ ಲಿಪಿಗಳನ್ನು ಅಳವಡಿಸಿಲಾಗಿದೆ. ಈ ಗೂಢಲಿಪೀಕರಣವು ಸಂಸಾರ, ಜೀವನ, ಬದುಕು, ಆನಂದ, ವಿನೋದ, ಅಂಗಮರ್ಧನ, ಆಯುರ್ವೇದ ಇತ್ಯಾದಿಗಳೆಲ್ಲ ದಾಖಲಿಸಿದೆ. ಈ ಧರ್ಮ ಗ್ರಂಥದ ಹೆಸರು “ದ ಚೇಂಜ್” ( ದ ತಾವೊ ಆಫ್ ಫಿಸಿಕ್ಸ ಬೈ ಫ್ರಿಟ್ಜಾಫ್ ಕಾಪ್ರ). ಕೆಲವು ಪಂಡಿತರು ಇಂತಹ ರಹಸ್ಯ ಗೂಢಲಿಪೀಕರಣವನ್ನು ಭೇದಿಸುತ್ತಾರೆ ಅಥವ ತೆರೆದು ಇಡುತ್ತಾರೆ. ಇದನ್ನು ಕೆಲವು ಡೊಂಗಿ ಸಾಧು ಸನ್ಯಾಸಿ ಹಾಗು ಪಂಡಿತರು ಮುಗ್ಧ ಜನರನ್ನು ತಮ್ಮಡೆಗೆ ಸೆಳೆದು ಮಾಟ ಮಂತ್ರದಿಂದ ಶಕ್ತಿ ವೃದ್ದಿ, ಶತ್ರು ನಾಶ ಮತ್ತು ಕಾಮೋತ್ಪತ್ತಿ ಎಂದೆಲ್ಲಾ ನಂಬಿಸಿ ಮೋಸ ಮಾಡುತ್ತಿರುವುದನ್ನು ಓದುತ್ತಿದ್ದೇವೆ ಮತ್ತು ಕೇಳುತ್ತಿದ್ದೇವೆ.

ಮೊದಲೇ ತಿಳಿಸಿದ ಹಾಗೆ ‘ತಂತ್ರ’ ನಮ್ಮ ಹಿಂದು ಧರ್ಮ ಗ್ರಂಥಗಳಲ್ಲಿ ಮಂತ್ರ ಮತ್ತು ಆಚರಣೆಗಳಿಗೆ ಮೀಸಲಾಗಿದೆ. ಈ ಜಗತ್ತಿನ ಜಗದಲ್ಲಿ ನನ್ನ ಆಸಕ್ತಿ ನಮ್ಮ ಮನಸ್ಸು ಮತ್ತು ಮಾನವ ರಚನಾ ವ್ಯವಸ್ಥೆಯನ್ನು ಯಂತ್ರ ಶಾಸ್ತ್ರಕ್ಕೆ ಅಳವಡಿಸಿ ಹೂಸ ನಿರೂಪಣೆಯ ಅನಾವರಣ ಮಾಡುವುದು. “ಆಗಮ ಶಾಸ್ತ್ರ” ದಲ್ಲಿ ತಂತ್ರವು ಪೂಜ್ಯ “ಶಕ್ತಿ” ಆರಾಧನೆ ಆಚರಣೆಯ ಅಂಶವಾಗಿದೆ. “ಶಿವ” ಮತ್ತು “ಪಾರ್ವತಿ” ನಡುವೆ ಆದ ಪ್ರೇಮ ಸಂಧಾನ, ಪಾವಿತ್ರತೆ ಮತ್ತು ಪರಾಮನಂದ ಒಳಗೊಂಡಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಶಿವ ಮತ್ತು ಪಾರ್ವತಿ ಮಧ್ಯೆ ಆದ ವಿಶ್ವ ಮಿಲನ ಪ್ರಬಂಧಕವು ಭಾರತದಲ್ಲಿ ನೆಲೆಸಿದ್ದಲ್ಲದೆ ಆಗ್ನೇಯ ಏಷ್ಯಾದ ಅನೇಕ ರಾಷ್ಟ್ರಗಳಿಗೆ ತಲುಪಿದೆ. ತಂತ್ರ ಅಥವ ತಾಂತ್ರಿಕ ವಿಷಯವು ಭೌಧ್ದ, ಕನ್ಫ್ಯೂಸಿಯಸ್, ಜೈನಾ, ಝೆನ್, ಶಿಂಟೊ, ಅಘೋರಿ, ಆನಂದ ಮಾರ್ಗ, ಹೀಗೆ ಹಲವಾರು ಧರ್ಮ ಮತ್ತು ಪಂಗಡಗಳಿಗೆ ಹರಡಿದೆ..
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

