ವಾಷಿಂಗ್ಟನ್, ಜೂನ್ 12: ಅಮೆರಿಕದಲ್ಲಿ ಜೂನ್ 14ರಂದು ನಡೆಯಲಿರುವ ಸೇನಾ ದಿನಕ್ಕೆ ಪಾಕಿಸ್ತಾನ(Pakistan) ಸೇನಾ ಮುಖ್ಯಸ್ಥ Asim Munirನನ್ನು ಆಹ್ವಾನಿಸಲಾಗಿದೆ. ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ಸಂಬಂಧ ಹದಗೆಟ್ಟಿದೆ. ಮತ್ತೊಂದೆಡೆ ಅಮೆರಿಕ-ಚೀನಾ ನಡುವಿನ ಸಂಬಂಧ ಕೂಡ ಹಳಸಿದೆ. ಈ ಸಮಯದಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ಹೆಚ್ಚು ಮನ್ನಣೆ ನೀಡುತ್ತಿರುವುದು ಭಾರತ ಹಾಗೂ ಚೀನಾಗೆ ತಲೆನೋವಾಗಿ ಪರಿಣಮಿಸಿದೆ.
ಇಂದು ಆಸಿಮ್ ಮುನೀರ್ ಅಮೆರಿಕ ತಲುಪುವ ನಿರೀಕ್ಷೆ ಇದೆ. ಜನರಲ್ ಮುನೀರ್ ಅಮೆರಿಕದ ಉನ್ನತ ಮಿಲಿಟರಿ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ, ಚೀನಾ, ಭಯೋತ್ಪಾದನೆ ಮತ್ತು ಭಾರತದೊಂದಿಗಿನ ಉದ್ವಿಗ್ನತೆಯ ಬಗ್ಗೆ ದೀರ್ಘ ಚರ್ಚೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಭಾರತದೊಂದಿಗಿನ ತನ್ನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಮತ್ತು ಅಮೆರಿಕದ ನಾಯಕತ್ವದ ನಡುವಿನ ಭೇಟಿಯ ಸಂದರ್ಭದಲ್ಲಿ, ಭಯೋತ್ಪಾದನೆ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಯ ವಿಷಯವನ್ನು ಪ್ರಮುಖವಾಗಿ ಎತ್ತಲಾಗುವುದು ಎಂದು ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿದ್ದ ಜಲ್ಮಯ್ ಖಲೀಲ್ಜಾದ್ ಬಹಿರಂಗಪಡಿಸಿದ್ದಾರೆ.
