
ರಾಮನಗರ : ಪ್ರತಿಷ್ಠಿತ ಕಂಪನಿಯಲ್ಲಿ ಕಿಡಿಗೇಡಿಗಳು ದೇಶದ್ರೋಹದ ಕೃತ್ಯ ಎಸಗಿದ್ದಾರೆ. ಕಂಪನಿಯ ಶೌಚಾಲಯದ ಗೋಡೆಯ ಮೇಲೆ “ಪಾಕಿಸ್ತಾನಜೈ” ಎಂದು ಬರೆಯಲಾಗಿದೆ. ಅಲ್ಲದೇ, ಕನ್ನಡಿಗರು ಸೂ…ಮಕ್ಕಳು ಎಂದು ಬರಹ ಇದೆ. ಬಿಡಿದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬರಹವನ್ನು ಯಾರು, ಯಾವಾಗ ಬರೆದಿದ್ದಾರೆ ಎಂಬುವುದಕ್ಕೆ ಸ್ಪಷ್ಟತೆ ಇಲ್ಲ. ಆದರೆ, ಘಟನೆ ಮಾರ್ಚ್ 15 ರಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಂಪನಿ ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂಪನಿ ಹೇಳಿದೆ.
ಕಂಪನಿಯ ಸುತ್ತೋಲೆಯಲ್ಲಿ ಏನಿದೆ?
“ಕೆಲವು ಕಿಡಿಗೇಡಿ ಉದ್ಯೋಗಿಗಳು PU ಲೈನಿನ ಶೌಚಾಲಯಗಳಲ್ಲಿ “ಪಾಕಿಸ್ತಾನ ಜೈ, ಕನ್ನಡಿಗರು ಸೂ,…. ಮಕ್ಕಳು ಎಂದು ಬರೆದಿರುತ್ತಾರೆ.
ಈ ರೀತಿಯ ಬರವಣಿಗೆಗಳು ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿಯನ್ನು ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಮುಂದುವರೆದು ಈ ರೀತಿಯ ಬರವಣಿಗೆಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ “ದೇಶದ್ರೋಹಿ” ಅಪರಾಧಗಳಡಿಯಲ್ಲಿ ವರ್ಗೀಕೃತವಾಗಿರುತ್ತವೆ.
ಈ ರೀತಿಯಾದ ಕೃತ್ಯಗಳು ಮುಂದುವರೆದಲ್ಲಿ, ಮಾಹಿತಿಯನ್ನು ಪೊಲೀಸರ ಗಮನಕ್ಕೆ ತರುವುದರೊಂದಿಗೆ ಜೈಲು ವಾಸವಾಗುವವರೆಗೂ ಕಿಡಿಗೇಡಿಗಳನ್ನು ಬಿಡುವುದಿಲ್ಲ ಮತ್ತು ಬೆರಳಚ್ಚು ಹಾಗೂ ಬರವಣಿಗೆ ತಜ್ಞರ ಗಮನಕ್ಕೆ ತಂದು ಈ ಕೃತ್ಯ ಎಸಗುವವರನ್ನು ಕಂಡುಹಿಡಿದು ಹೆಚ್ಚಿನ ಮಟ್ಟದಲ್ಲಿ ಶಿಕ್ಷೆಯಾಗುವವರೆಗೂ ಆಡಳಿತ ಮಂಡಳಿಯು ಕಾಳಜಿ ವಹಿಸಲು ಸಿದ್ಧವಿರುತ್ತದೆ.