
ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರದೇಶದಲ್ಲಿ ಸಶಸ್ತ್ರ ಬಂಡುಕೋರರು ಹೈಜಾಕ್ ಮಾಡಿದ ರೈಲಿನಿಂದ ಒತ್ತೆಯಾಳುಗಳನ್ನು ರಕ್ಷಿಸಲು ಪಾಕಿಸ್ತಾನ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಾತ್ರಿಯಿಡೀ 150 ಕ್ಕೂ ಹೆಚ್ಚು ಪ್ರಯಾಣಿಕರನ್ನು ಪಾಕ್ ಪಡೆಗಳು ರಕ್ಷಿಸಿವೆ.
ಶಸ್ತ್ರಸಜ್ಜಿತ ದಾಳಿಕೋರರೊಂದಿಗಿನ ಗುಂಡಿನ ಚಕಮಕಿಯ ನಂತರ ಭದ್ರತಾ ಪಡೆಗಳು 155 ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಯಾಚರಣೆ ವೇಳೆ 27 ಬಂಡುಕೋರರನ್ನು ಹೊಡೆದುರುಳಿಸಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ರಕ್ಷಿಸಲಾದ ಪ್ರಯಾಣಿಕರನ್ನು ಹತ್ತಿರದ ಪಟ್ಟಣವಾದ ಮಾಚ್ಗೆ ಕರೆದೊಯ್ಯಲಾಗಿದೆ. ಅಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಬಂಡುಕೋರರು ಮತ್ತು ಪಾಕಿಸ್ತಾನಿ ಪಡೆಗಳ ನಡುವಿನ ಗುಂಡಿನ ಚಕಮಕಿ ರಾತ್ರಿಯಿಡೀ ಮುಂದುವರಿಯಿತು. ಜಾಫರ್ ಎಕ್ಸ್ಪ್ರೆಸ್ನಲ್ಲಿ ಎಷ್ಟು ಒತ್ತೆಯಾಳುಗಳು ಉಳಿದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿಎಲ್ಎ, 30 ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ.
ಬಂಡುಕೋರರ ಗುಂಪೊಂದು ಕೆಲ ಜನರನ್ನು ಪರ್ವತಗಳಿಗೆ ಒತ್ತೆಯಾಳುಗಳಾಗಿ ಸಾಗಿಸಿದೆ. ಅವರನ್ನು ಪಾಕ್ ಪಡೆಗಳು ಬೆನ್ನಟ್ಟುತ್ತಿವೆ ಎಂದು ತಿಳಿಸಲಾಗಿದೆ.