
ಅಂದಿಗೆ ನಾನು ಊರಿಗೆ ಹೋಗಿ 15 ದು ವರ್ಷಗಳೇ ಕಳೆದಿದ್ದವು , ಬಿ ಇ ಮುಗಿಸಿ ಅಮೆರಿಕಾಕ್ಕೆ ಹೋದವನು, ದುಡ್ಡಿನ ಆಸೆ ತಲೆಗೆ ಹತ್ತಿ ಬೇರೆಲ್ಲವೂ ಕಾಣದಾಗಿತ್ತು ನನಗೆ..
ನಮ್ಮದು ಮಧ್ಯಮ ವರ್ಗದ ಸಣ್ಣ ಕುಟುಂಬ , ಅಪ್ಪ-ಅಮ್ಮ ನಾನು ಮತ್ತು ತಂಗಿ ಇಷ್ಟೆ ನಮ್ಮ ಪ್ರಪಂಚ . ಅಪ್ಪ ಅಮ್ಮನ ಮೇಲೆ ನನಗೆ ತುಂಬಾ ಪ್ರೀತಿ, ಅದರಲ್ಲೂ ಅಪ್ಪನನ್ನು ಕಂಡರೆ ನನಗೆ ಎಲ್ಲಿಲ್ಲದ ಧ್ಯಾನ , ಏಕೆಂದರೆ ನನ್ನಪ್ಪನ ವ್ಯಕ್ತಿತ್ವವೇ ಹಾಗೆ ಧರ್ಮರಾಯನಂತವನು ಅವನು . ಅಮ್ಮನಿಗೆ ಏನೂ ತಿಳಿಯುತ್ತಿರಲಿಲ್ಲ , ಅಷ್ಟಾಗಿ ವಿದ್ಯಾವಂತಳಲ್ಲ ಅವಳು. ಅಪ್ಪನ ನೆರಳಲ್ಲೇ ತನ್ನ ಇಡೀ ಜೀವನವನ್ನು ಕಂಡುಕೊಂಡಿದ್ದಳು.
ನಾನು ಎಸ್ ಎಸ್ ಎಲ್ ಸಿ ವರೆಗೂ ಅಪ್ಪ ಅಮ್ಮನ ಜೊತೆಇದ್ದುಕೊಂಡೇ ಓದಿದ್ದೆ, ಅದೇನೋ ಗೊತ್ತಿಲ್ಲ ಸರಸ್ವತಿ ನನಗೆ ತುಂಬಾ ಒಲಿದು ಬಿಟ್ಟಿದ್ದಳು. ಸ್ಕೂಲ್ ಕಾಲೇಜುಗಳಲ್ಲಿ ಚೆನ್ನಾಗಿ ಓದಿ ಒಳ್ಳೆಯ ರ್ಯಾಂಕ್ ಗಳಿಸುತ್ತಿದೆ, ಮುಂದೆ ಇದೇ ರ್ಯಾಂಕ್ ಗಳು ಅಪ್ಪ ಅಮ್ಮನ ಪ್ರೀತಿಯನ್ನು ಕಿತ್ತುಕೊಂಡಿದ್ದವು.
ಪಿಯುಸಿ ನಲ್ಲಿ ರ್ಯಾಂಕ್ ಪಡೆದು ಬಿಇ ಮುಗಿಸಿದೆ , ನಂತರ ಒಂದು ಪ್ರತಿಷ್ಠಿತ ಬೆಂಗಳೂರಿನ ಕಂಪನಿಯು ನನ್ನನ್ನು ಆಯ್ಕೆ ಮಾಡಿಕೊಂಡಿತ್ತು, ಅಂದು ಕೆಲಸಕ್ಕೆಂದು ಬೆಂಗಳೂರಿಗೆ ಹೊರಟ ನಾನು ಮೊದಲ ಬಾರಿಗೆ ಅಪ್ಪ-ಅಮ್ಮನ ಕಣ್ಣುಗಳಲ್ಲಿ ನೀರನ್ನು ಕಂಡಿದ್ದೆ, ಅಲ್ಲಿಯವರೆಗೂ ನನ್ನ ಮಗ ಚೆನ್ನಾಗಿ ಓದಲಿ , ನನ್ನ ಹೆಸರು ಉಳಿಸಲಿ ಎಂದು ಕಷ್ಟ ಪಡುತ್ತಿದ್ದ ಅಪ್ಪ ಅಂದು ಬೆಂಗಳೂರಿಗೆ ಕಳುಹಿಸುವ ದಿನ ಯಾಕೋ ಅತ್ತಿದ್ದ , ಅವನಿಗೆ ಅಂದೇ ಅನ್ನಿಸಿತ್ತೋ ಏನೋ ಇನ್ನು ಮುಂದೆ ನನ್ನ ಮಗ ರೆಕ್ಕೆ ಬಿಚ್ಚಿ ಹಾರುತ್ತಾನೆ , ಅಪ್ಪನ ಮಾತುಗಳು ಅವನಿಗೆ ನಗಣ್ಯವಾಗುತ್ತವೆ ಎಂದು.
ಬೆಂಗಳೂರಿನಲ್ಲಿ ಮೂರು ವರ್ಷ ಕೆಲಸ ಮಾಡಿದ್ದೆ , ಅಲ್ಲಿನ ಐಷಾರಾಮಿ ಜೀವನ ನನ್ನನ್ನು ಸೆಳೆದಿತ್ತು, ಅದು ದುಡ್ಡು ಮಾಡುವಂತೆ ದಿನವೂ ನನ್ನನ್ನು ಒಳಗೊಳಗೆ ಪ್ರೇರೇಪಿಸುತ್ತಿತ್ತು, ಮುಂದೆ ನಾನು ಹೋದ ದಾರಿಯಲ್ಲಿ ನನ್ನತನವನ್ನು ಬಿಟ್ಟು ಬರೀ ದುಡ್ಡಿನ ಹಿಂದೆ ಆಸೆಯ ಹಿಂದೆ ಓಡತೊಡಗಿದೆ.
ನಂತರ ಅಮೆರಿಕಾದ ಒಂದು ಕಂಪನಿ ಗೆ ಆಯ್ಕೆಯಾಗಿ , ಅಪ್ಪ ಅಮ್ಮನಿಗೆ ತಿಳಿಸುವ ಎಂದು ಊರಿಗೆ ಬಂದಿದ್ದೆ , ಅಪ್ಪನ ಕಣ್ಣುಗಳಲ್ಲಿ ಎರಡನೆಯ ಬಾರಿ ಕಣ್ಣೀರನ್ನು ನೋಡಿದೆ , ಮೊದಲನೆಯ ಬಾರಿ ಬೆಂಗಳೂರಿಗೆ ಕಳುಹಿಸಿದ್ದ ದಿನ ಮತ್ತು ಈಗ ಅದೇ ಮಗನನ್ನು ಸಂಪೂರ್ಣವಾಗಿ ಕಳೆದುಕೊಂಡು ಅಮೆರಿಕಾಕ್ಕೆ ಕಳುಹಿಸಲು ಒಲ್ಲದ ಮನಸ್ಸಿನಿಂದ ಬಸ್ಟ್ಯಾಂಡಿಗೆ ಬಂದಿದ್ದ , ಇವೆಲ್ಲ ಮೊದಲೇ ತಿಳಿದಿದ್ದರೆ ನನ್ನನ್ನು ಓದಿಸುತ್ತಲೇ ಇರಲಿಲ್ಲವೇನೋ ನನ್ನಪ್ಪ.
ಅಮೆರಿಕಾಕ್ಕೆ ಹೋದ ನಾನು ಕೆಲವೇ ತಿಂಗಳುಗಳಲ್ಲಿ ಬದಲಾಗಿಬಿಟ್ಟಿದ್ದೆ .
ಅಪ್ಪ-ಅಮ್ಮ ತಂಗಿ ಎಲ್ಲರನ್ನೂ ಮರೆತು ಹಣದ ಹಿಂದೆ ಓಡತೊಡಗಿದ್ದೆ.
ನನ್ನ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಾ ಹೋದಂತೆ, ಸಂಬಂಧಗಳಲ್ಲಿನ ಭಾವುಕತೆ ಕಡಿಮೆಯಾಗುತ್ತಾ ಹೋಗುತ್ತಿತ್ತು ನನ್ನಲ್ಲಿ.
ನೋಡಲು ಆಸೆಯಾಗಿದೆ ಬಾ, ಶಿವರಾತ್ರಿ ಹಬ್ಬವಿದೆ , ಹಿರಿಯರಿಗೆ ಎಡೆ ಇಡುವ ದೀಪಾವಳಿ ಹಬ್ಬ ಬಂದಿದೆ, ವರ್ಷದ ಮೊದಲ ಹಬ್ಬ ಯುಗಾದಿ ಬಂದಿದೆ , ಏಳು ವರ್ಷಕ್ಕೊಮ್ಮೆ ನಡೆಯುವ ಊರ ಜಾತ್ರೆಗೆ ಬಾ , ಎಂದೆಲ್ಲಾ ಎಷ್ಟೇ ಕೇಳಿಕೊಂಡರು ನನ್ನ ಮನಸ್ಸು ಕರಗುತ್ತಲೇ ಇರಲಿಲ್ಲ, ತಂಗಿಯ ಮದುವೆಗೂ ಕೂಡ ಬರಲಿಲ್ಲ ನಾನು , ಎಂಥಹಾ ಪಾಪಿ ನಾನು ಎಂದೆನಿಸುತ್ತದೆ ಇಂದು ನನಗೆ..
ಅವತ್ತು ಬೆಳ್ಳಂಬೆಳಗ್ಗೆ ಕಾಲ್ ಬಂದಿತ್ತು “ನಿಮ್ಮ ಅಪ್ಪನಿಗೆ ತೀರಾ ಹುಷಾರಿಲ್ಲ ಬಂದು ನೋಡಿಕೊಂಡು ಹೋಗಿ ಎಂದು” ಹೇಳಿದ್ದರು ಅವರು.
ಇವರದ್ದು ಇದ್ದೇ ಇದೆ , ಊರಿಗೆ ಕರೆಸಿಕೊಳ್ಳಲು ಏನಾದರೂ ಒಂದು ನೆಪ ಹುಡುಕಿಯೇ ಇರುತ್ತಾರೆ ಎಂದು ಸುಮ್ಮನೆ ಕಾಲ್ ಕಟ್ ಮಾಡಿದ್ದೆ .
ಅಂದು ರಾತ್ರಿ ಕನಸಿನಲ್ಲಿ ಇದ್ದಕ್ಕಿದ್ದಂತೆ ಅಮ್ಮ ಬಂದು ಅಪ್ಪನನ್ನು ಕೊನೆಯ ಬಾರಿ ನೋಡಿಕೊಂಡು ಹೋಗು ಬಾ ಕಂದ ಎಂದಳು, ಮೈಯೆಲ್ಲಾ ಬೆವರಿ ಹೋಗಿತ್ತು , ಮೊದಲ ಬಾರಿಗೆ ಕರುಳ ಬಳ್ಳಿ ಚುರುಗುಟ್ಟಿತ್ತು.
ಊರಿಗೆ ಬರುವಷ್ಟರಲ್ಲಿ ತುಂಬಾ ದಿನಗಳೇ ಕಳೆದಿದ್ದವು. ಏಕೆಂದರೆ ನೋಡಬೇಕು ಎಂದ ತಕ್ಷಣ ಓಡಿ ಬರಲು ಅಮೇರಿಕ ಅಷ್ಟು ಹತ್ತಿರದಲ್ಲಿಲ್ಲ , ಅಲ್ಲಿಂದ ಬರಲು ಅದರದೇ ಆದ ರೀತಿಗಳಿವೆ.
ಊರಿಗೆ ಬಂದು ನೋಡಿದರೆ ನಮ್ಮ ಮನೆಗೆ ಬೀಗ ಹಾಕಿದೆ, ನೋಡಿದ ತಕ್ಷಣ ನೆನಪಿಗೆ ಬಂದ ಸಾಲುಗಳಿವು..
ಹಳೆಯ ಮನೆ ಇಹುದಿಲ್ಲಿ
ಹೊಸ ಜನರು ಬರುತ್ತಿಲ್ಲ
ಖಾಲಿ ಕಾಣುತಲಿಹುದು ಹೊರ ಜಗುಲಿಯು..!!
ಪಕ್ಕದ ಮನೆಗೆ ಹೋಗಿ ವಿಚಾರಿಸಿದೆ , ಮನೆ ಬಿಟ್ಟು ಹೋಗಿ ಐದು ವರ್ಷಗಳೇ ಆಗಿದೆ, ಯಾವುದೋ ಅನಾಥಾಶ್ರಮಕ್ಕೆ ಸೇರಿಸಿದ್ದಾಳೆ ನಿನ್ನ ತಂಗಿ ಎಂದರು , ನನ್ನೆಲ್ಲಾ ಸರ್ವಸ್ವವೂ ಕುಸಿದು ಬಿದ್ದಂತಾಯಿತು.
ಅಪ್ಪ ಅಮ್ಮ ಇರುವ ಅನಾಥಾಶ್ರಮವನ್ನು ಹುಡುಕಿಕೊಂಡು ಹೊರಟೆ. ಹಾಸನದ ಯಾವುದೋ ಗಲ್ಲಿಗೆ ತಂದು ನಿಲ್ಲಿಸಿದ ಆಟೋ ಡ್ರೈವರ್ ನನ್ನ ಮುಖಕ್ಕೆ ಉಗುಳುವ ರೀತಿ ನೋಡಿದ, ಅಲ್ಲಿಗೆ ನನ್ನ ಯೋಗ್ಯತೆ ಅರ್ಥವಾಗಿ ಹೋಗಿತ್ತು.
ಅನಾಥಾಶ್ರಮದ ಹೊರಗಡೆ ಹಾಕಿದ್ದ ಬೋರ್ಡ್ ಹೀಯಾಳಿಸುತ್ತಿತ್ತು ನನ್ನನ್ನು.
“ತಂದೆ ತಾಯಿ ಮಾರಾಟಕ್ಕಿದ್ದಾರೆ” ಅಡಿಬರಹ- ಎರಡು ಹೊತ್ತು ಊಟ ಕೊಟ್ಟು, ಹೃದಯದಿಂದ ಮಾತನಾಡಿಸಬಲ್ಲ ಮಕ್ಕಳು ಬೇಕಾಗಿದ್ದಾರೆ ಎಂದು ಬರೆದಿತ್ತು.
ಒಳಗೆ ಹೋಗಿ ನನ್ನ ಅಪ್ಪ ಅಮ್ಮ ಉಳಿದಿದ್ದ ರೂಮ್ ನಂಬರ್ ತಿಳಿದು ಅಲ್ಲಿಗೆ ಹೊರಟೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಅಮ್ಮ ತುಂಬಾ ಖುಷಿಪಟ್ಟಳು , ಕೊನೆಗೂ ಬಂದೆಯಾ ಕಂದ ಎಂದಳು.
ಅಪ್ಪ ಎಲ್ಲಿ ಎಂದು ಕೇಳಿದೆ, ಸುಮ್ಮನೆ ಅತ್ತ ತಿರುಗಿ ಮಲಗಿಕೊಂಡು ಕಣ್ಣೀರು ಹಾಕ ತೊಡಗಿದಳು…
ಎಲ್ಲವೂ ನನಗೆ ಅರ್ಥವಾಗಿತ್ತು, ಆದರೆ ಅರ್ಥವಾಗುವ ಮೊದಲೇ ಎಲ್ಲವೂ ಮುಗಿದುಹೋಗಿತ್ತು .
ಹಿಟ್ಟು ಬಟ್ಟೆಗೆ ಕಷ್ಟ ಪಡುತ್ತಿದ್ದ ಕಾಲದಲ್ಲೂ , ಸ್ವಲ್ಪವೂ ಕಷ್ಟಗಳನ್ನೇ ಕೊಡದೆ , ತನ್ನೆಲ್ಲ ಕನಸುಗಳನ್ನು ನನ್ನಲ್ಲೇ ಕಂಡು, ವಿದ್ಯಾವಂತನಾಗಿ ಮಾಡಿ, ಕೊನೆಗೂ ವಿದಾಯ ಹೇಳದೆ ಹೊರಟು ಹೋಗಿದ್ದ ನನ್ನಪ್ಪ.
ಕಣ್ಣಲ್ಲಿ ಕಣ್ಣೀರು ಬರಲೇ ಇಲ್ಲ ಎಂತಹ ಅಪ್ಪನಿಗೆ ಎಂತಹ ಮಗ ಎನ್ನುವ ಕೊರಗು ಕಾಡತೊಡಗಿತು , ನಾನು ಅವನ ಹೊಟ್ಟೆಯಲ್ಲಿ ಹುಟ್ಟಲೇ ಬಾರದಿತ್ತು ಎನಿಸತೊಡಗಿತು.
ಅಮ್ಮನ ಹತ್ತಿರ ಹೋಗಿ ಅಂಗಲಾಚಿ ಬೇಡಿದೆ, ಈಗಲಾದರೂ ಮನೆಗೆ ಹೋಗೋಣ ಬಾ ಎಂದು, ಅವಳು ಕಡಾ ಖಂಡಿತವಾಗಿ ಹೇಳಿದರು ನಿನ್ನ ಅಪ್ಪ ತೀರಿಕೊಂಡ ಜಾಗದಲ್ಲೇ ನಾನು ಪ್ರಾಣವನ್ನು ಬಿಡುತ್ತೇನೆ, ಇಷ್ಟವಿದ್ದರೆ ಆಗಾಗ ಬಂದು ನೋಡಿಕೊಂಡು ಹೋಗು ಎಂದಳು.
ಪ್ರಪಂಚದಲ್ಲಿ ಹಣಕ್ಕೆ ಇರುವ ಮಹತ್ವ ಮತ್ತು ಬೆಲೆ ಯಾವುದಕ್ಕೂ ಇಲ್ಲ ಎಂದು, ಹಣದ ಬೆನ್ನು ಹತ್ತಿ ಹೊರಟಿದ್ದ ನನಗೆ ಇಂದು ಅರ್ಥವಾಯಿತು.
ಅಪ್ಪ ಅಮ್ಮ ಇಲ್ಲದವ ಅವನಲ್ಲಿ ಏನೇ ಇದ್ದರೂ ಅನಾಥನೇ ಎಂದು, ಬ್ರಹ್ಮನ ಹಣೆಬರಹ ಮತ್ತು ಜವರಾಯನ ಪಾಶಕ್ಕೆ ಹಣದ ಬೆಲೆ ನಗಣ್ಯ ಎಂದು.
–ಇಂತಿ ನಿಮ್ಮವ ಅಪರಿಚಿತ ಮೌನಿ