ಹಾಸನ, ಆ.09: ದೇಶದ ಹಿರಿಮೆ ಮತ್ತು ಗರಿಮೆ ಸಾರುವ ದೇಶಭಕ್ತಿ ಗೀತೆಗಳು ಜನರಲ್ಲಿ ದೇಶಪ್ರೇಮವನ್ನು ಮೂಡಿಸಿ, ಒಂದೇ ರಾಷ್ಟ್ರವೆಂಬ ಭಾವನೆ ಬೆಳೆಸುತ್ತವೆ ಎಂದು ಗೈಡ್ ಆಯುಕ್ತೆ ಜಯಾ ರಮೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಹಾಸನ ಸ್ಥಳೀಯ ಸಂಸ್ಥೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಿದ್ದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಗೆ ಹಾಜರಾಗಿ ಅವರು ಮಾತನಾಡಿದರು. ದೇಶದ ವೈವಿಧ್ಯತೆಯನ್ನು ಮರೆಮಾಚಿ, ಏಕತೆ ಸಾಧಿಸಲು ದೇಶಭಕ್ತಿ ಗೀತೆಗಳು ಮಹತ್ತರ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬಿ.ಎಸ್. ವನಜಾಕ್ಷಿ ಆಗಸ್ಟ್ ತಿಂಗಳು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಸಮಯವಾಗಿದೆ ಎಂದು ಹೇಳಿ, ಇಂತಹ ಗೀತೆಗಳನ್ನು ಸಂಭ್ರಮಿಸುವುದೇ ಗೀತ ಗಾಯನ ಸ್ಪರ್ಧೆಯ ಉದ್ದೇಶ ಎಂದು ವಿವರಿಸಿದರು.

ಸುಮಾರು 20ಕ್ಕೂ ಹೆಚ್ಚು ಶಾಲೆಗಳ 120 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ರೇಂಜರ್, ಬುಲ್ಬುಲ್ಸ್, ಗೈಡ್ಸ್ ವಿಭಾಗದಲ್ಲಿ ಸಂತ ಫಿಲೋಮಿನಾ ಶಾಲೆ ಪ್ರಥಮ ಸ್ಥಾನ ಗಳಿಸಿತು. ಗ್ಯಾರೆಲಿ ತಮ್ಮಯ್ಯ ಶಾಲೆ ದ್ವಿತೀಯ ಸ್ಥಾನ ಪಡೆದಿತು. ಕಬ್ ವಿಭಾಗದಲ್ಲಿ ಹೆದಗೂ ಶಾಲೆಯ ಕಪ್ಸ್ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ರೋವರ್ ಲೀಡರ್ ಗಿರೀಶ್, ಹರ್ಷಿಯ ತಬಸ್ಸುಮ್, ಹೆಚ್.ಜಿ. ಕಾಂಚನಮಾಲ, ಗೈಡ್ ಕ್ಯಾಪ್ಟನ್ ಧನಲಕ್ಷ್ಮಿ, ಭಾಗ್ಯ, ಪ್ಲಾಕ್ ಲೀಡರ್ ಜೋವಿಟಾ, ರೇಂಜರ್ ಲೀಡರ್ ಅಶ್ವಿನಿ, ಸುನಿತಾ, ಸ್ಕೌಟ್ ಮಾಸ್ಟರ್ ನೂತನ್ ಮತ್ತು ದೇವರಾಜು ಸೇರಿದಂತೆ ಹಲವರು ಭಾಗವಹಿಸಿದರು.

ರೋವರ್ ಲೀಡರ್ ಗಿರೀಶ್ ನಿರೂಪಣೆ ನಡೆಸಿ, ಹರ್ಷಿಯ ತಬಸ್ಸುಮ್ ಧನ್ಯವಾದ ಸಲ್ಲಿಸಿದರು.
