ದೆಹಲಿ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆಡಳಿತಾವಧಿಯಲ್ಲಿ ಆ ರಾಷ್ಟ್ರದ ಪರಮಾಣು ಶಸ್ತ್ರಾಗಾರವು ಅಮೆರಿಕದ ಪೆಂಟಗನ್ ನಿಯಂತ್ರದಲ್ಲಿತ್ತು” ಎಂದು ಹೇಳುವ ಮೂಲಕ ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಬಾಂಬ್ ಸಿಡಿಸಿದ್ದಾರೆ.
ಅಮೆರಿಕದ ಮಾಜಿ ಅಧಿಕಾರಿ ಹೇಳಿಕೆ, ತನ್ನ ಪರಮಾಣು ಶಸ್ತ್ರಾಗಾರಗಳನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನದ ಅಸಮರ್ಥತೆ ಸತ್ಯವನ್ನು ಜಗತ್ತಿಗೆ ಸಾರಿದೆ.
ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಾನ್ ಕಿರಿಯಾಕೌ, “2002ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ಅವರ ಸಹಕಾರವನ್ನು ಖರೀದಿಸಲು, ಅಮೆರಿಕವು ಪಾಕಿಸ್ತಾನಕ್ಕೆ ಲಕ್ಷಾಂತರ ಡಾಲರ್ಗಳನ್ನು ಒದಗಿಸಿತ್ತು. ಮುಷರಫ್ ಕೂಡ ಅಮೆರಿಕ ಹೇಳಿದಂತೆ ಕೇಳುತ್ತಿದ್ದರಲ್ಲದೇ, ತಮ್ಮ ಪರಮಾಣು ಶಸ್ತ್ರಾಗಾರಗಳ ನಿಯಂತ್ರಣವನ್ನು ಪೆಂಟಗನ್ಗೆ ಒಪ್ಪಿಸಿದ್ದರು” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
“ನಾನು 2002ರಲ್ಲಿ ಪಾಕಿಸ್ತನಾದಲ್ಲಿ ಕರ್ತವ್ಯನಿರತನಾಗಿದ್ದಾಗ, ಪೆಂಟಗನ್ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನು ನಿಯಂತ್ರಿಸುತ್ತದೆ ಎಂಬ ಮಾಹಿತಿಯನ್ನು ನನಗೆ ಅನಧಿಕೃತವಾಗಿ ತಿಳಿಸಲಾಯಿತು. ಪಾಕಿಸ್ತಾನದ ಪರಮಾಣು ಕಾರ್ಯಕ್ರಮಗಳು ಭಯೋತ್ಪಾದಕರ ಕೈ ಸೇರಬಾರದು ಎಂಬ ಕಾರಣಕ್ಕೆ, ಪರ್ವೇಜ್ ಮುಷರಫ್ ಇಂತದ್ದೊಂದು ನಿರ್ಧಾರ ತೆಗೆದುಕೊಂಡಿದ್ದರು ಎಂಬ ಸಂಗತಿ ನನ್ನ ಅರಿವಿಗೆ ಬಂದಿತು” ಎಂದು ಮಾಜಿ ಸಿಐಎ ಅಧಿಕಾರಿ ಹೇಳಿದ್ದಾರೆ.
