ಹಾಸನ: ಅಸ್ಪಶ್ಯತೆ, ಜಾತಿ ತಾರತಮ್ಯ, ಸ್ತ್ರೀ ಅಸಮಾನತೆ ವಿರುದ್ಧ ಪ್ರತಿ ಕಾಲಘಟ್ಟದಲ್ಲೂ ದಾರ್ಶನಿಕರು ಹೋರಾಟ ನಡೆಸಿದ್ದು, ಅದನ್ನು ಅರಿತು ಮುನ್ನಡೆಯಬೇಕಿದೆಯೆಂದು ಸಾಹಿತಿ ಡಾ. ಕಾಳೇಗೌಡ ನಾಗಾವರ ಅವರು ಹೇಳಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಭಾನುವಾರ ಹಮಿಕೊಂಡಿದ್ದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಲೋಹಿಯಾ, ಪೆರಿಯಾರ್, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಮಹಾತ ಗಾಂಧೀಜಿ, ಕೊಡಗಿನ ಗೌರಮ ಹೀಗೆ ಅನೇಕರು ತಮದೇಯಾದ ಹೋರಾಟದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆಂದರು. ಮಹಾತ ಗಾಂಧೀಜಿ ಆಮರಣಾಂತ ಉಪವಾಸ ಕೈಗೊಂಡಿದ್ದಾಗ ಸತ್ಯಾಗ್ರಹ ವಾಪಾಸ್ ಪಡೆಯದಿದ್ದರೆ ಹಿಂದುಳಿದ ಸಮಾಜ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಾಗ ಗಾಂಧೀಜಿ ಅವರು, ನಾನು ಹಿಂದುಳಿದವರ ದತ್ತು ಮಗ ಅವರ ಕಷ್ಟಗಳೆಲ್ಲಾ ಗೊತ್ತು ಎಂದಿದ್ದರು. ಅದಕ್ಕೆ ಅಂಬೇಡ್ಕರ್ ಅವರು, ನೀವು ದತ್ತು ಮಗ ಮಾತ್ರ ನಾನು ಮನೆ ಮಗ ಎಂದು ಗಾಂಧೀಜಿ ಅವರ ಮನವೊಲಿಸಿದ್ದರು. ಅದೇ ರೀತಿ ಕೊಡಗಿನ ಗೌರಮ ಗಾಂಧೀಜಿಗೆ ವೇದಿಕೆಯಿಂದ ಕೆಳಗಿಳಿದು ಹೋರಾಡಿ ಎಂದು ಸಲಹೆ ನೀಡಿದ್ದರು. ಇದೇ ರೀತಿ ಅನೇಕ ನಿದರ್ಶನಗಳು ನಮ ನಡುವೆ ಇದ್ದು ಇತಿಹಾಸವನ್ನು ಯುವ ಸಮಾಜ ಅರಿಯಬೇಕೆಂದರು. ರಾಜ್ಯದ ಪ್ರತಿ ಜಿಲ್ಲೆಗೂ ತನ್ನದೇಯಾದ ವೈಶಿಷ್ಟ್ಯವಿದೆ. ಪತ್ರಕರ್ತ ಉದಯರವಿ ಅವರು ಹಾಸನ ಜಿಲ್ಲಾ ವೈಶಿಷ್ಟ್ಯ ಎಂಬ ಪುಸ್ತಕ ಬರೆದಿದ್ದು ಸಂಗ್ರಹ ಯೋಗ್ಯವಾಗಿದೆ. ಹಾಸನ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯ, ಕಲೆ, ಕ್ರೀಡೆ, ಪತ್ರಿಕೋದ್ಯಮ ಹೀಗೆ ನಾನಾ ಕ್ಷೇತ್ರಗಳಲ್ಲಿ ಜಿಲ್ಲೆ ಗುರುತರ ಸಾಧನೆ ಮಾಡಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಾ.ಎಸ್.ಎಲ್.ಭೈರಪ್ಪ, ಎಸ್.ಕೆ.ಕರೀಂಖಾನ್ರಂತಹ ಸಾಹಿತಿಗಳು ಹುಟ್ಟಿರುವ ಶ್ರೇಷ್ಠ ಜಿಲ್ಲೆ ಇದಾಗಿದೆಯೆಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಅವರು ಮಾತನಾಡಿ, ಉದಯರವಿ ಮತ್ತು ನಾನು ಬಾಲ್ಯದ ಗೆಳೆಯರು. ಅವರ ಜೀವನದ ಏಳುಬೀಳುಗಳಲ್ಲಿ ನಾನು ಸಾಕ್ಷಿಯಾಗಿದ್ದೇನೆ. ಪತ್ರಕರ್ತರಾಗಿ ಸದಾ ಬರವಣಿಗೆಯಲ್ಲಿ ತೊಡಗಿರುವ ಅವರ ಸಾಹಿತ್ಯ ಕೃಷಿ ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಹಾಸನ ಜಿಲ್ಲಾ ವೈಶಿಷ್ಟ್ಯ ಕೃತಿ ಕುರಿತು ಕನ್ನಡ ಪ್ರಾಧ್ಯಾಪಕ ಡಾ.ಜಯಶಂಕರ ಹಲಗೂರು ಅವರು ಮಾತನಾಡಿ, ಯಾವ ಜಿಲ್ಲೆಯಾದರೂ ಅದಕ್ಕೆ ತನ್ನದೇಯಾದ ವೈಶಿಷ್ಟ್ಯತೆ ಇರುತ್ತದೆ. ಅದನ್ನು ಬಹಳ ಸೊಗಸಾಗಿ ಉದಯರವಿ ಅವರು ಪುಸ್ತಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಭವಿಷ್ಯದ ಪೀಳಿಗೆಗೆ ಆಕರ ಗ್ರಂಥವಾಗಲಿದೆ. ಜಿಲ್ಲೆಯ ಇತಿಹಾಸ, ಸಂಸ್ಕೃತಿ, ರಾಜಕೀಯವನ್ನು ಸೂಕ್ಷ್ಮವಾಗಿ ತಿಳಿಸಿಕೊಡುವ ಅತ್ಯುತ್ತಮ ಕೃತಿ ಇದಾಗಿದೆಯೆಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ರಾಜಕೀಯ ಮುನ್ನಲೆಗೆ ಬಂದು ಸಾಂಸ್ಕೃತಿಕ ಚಟುವಟಿಕೆ ತೆರೆಮರೆಗೆ ಸರಿಯುತ್ತಿದೆ. ಮನುಷ್ಯನ ಅಸ್ತಿತ್ವ ಕಂಡುಬರುವುದು ಸಾಂಸ್ಕೃತಿಕ ಪ್ರಭಾವದಿಂದ ಎಂಬುದು ಸತ್ಯ. ಆದರೆ ಅದಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಸಾಂಸ್ಕೃತಿಕ ಒರತೆಗಳು ಜನಮಾನಸದಲ್ಲಿ ಯಾವಾಗಲೂ ಇರಬೇಕೆಂದು ಪ್ರತಿಪಾದಿಸಿದರು.
ಸಾಹಿತಿ ಕೃಷ್ಣಹಾನುಬಾಳು ಅವರ ಬರೆದ ಏಳು ಬೀಳಿನ ಹಾದಿಯಲ್ಲಿ ಕೃತಿ ಕುರಿತು ಸಾಹಿತಿ ಡಾ.ರಾಮಲಿಂಗೇಶ್ವರ ಮತ್ತು ಜಯಂತಿ ಚಂದ್ರಶೇಖರ್ ಅವರ ನಿರ್ಲಿಪ್ತ ಕಾದಂಬರಿ ಕುರಿತು ಪತ್ರಕರ್ತ ಕೆ.ಆರ್.ನೀಲಕಂಠ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಉದಯರವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾನಪದ ವಿದ್ವಾಂಸ ಚಂದ್ರು ಕಾಳೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹಿಮ್ಸೌ ಪ್ರಾಂಶುಪಾಲ ಡಾ॥ ಬಿ.ಸಿ.ರವಿಕುಮಾರ್ ಮತ್ತಿತರರಿದ್ದರು.
