ಮಂಗಳೂರು, ಫೆಬ್ರವರಿ 02: ಕರಾವಳಿಗರ ನೆಚ್ಚಿನ ಪ್ರವಾಸಿ ತಾಣವಾಗಿರುವ ಪಿಲಿಕುಳ ಮೃಗಾಲಯ ಕಳೆದ ಕೆಲ ವರ್ಷಗಳಿಂದ ತೀವ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿರುವುದು ಹೈಕೋರ್ಟ್ ಗಮನಕ್ಕೆ ಬಂದಿದೆ. ಮೃಗಾಲಯದಲ್ಲಿನ ಪ್ರಾಣಿಗಳ ದುಸ್ಥಿತಿಯನ್ನು ತೋರಿಸುವ ಫೋಟೋಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪರಿಶೀಲಿಸಿದ ಹೈಕೋರ್ಟ್ ನ್ಯಾಯಪೀಠ, ಸ್ಥಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವನ್ಯಜೀವಿ ಸಂರಕ್ಷಕ ಭುವನ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ, ಪ್ರಾಣಿಗಳು ನರಳುತ್ತಿರುವ ದೃಶ್ಯಗಳು ನ್ಯಾಯಮೂರ್ತಿಗಳಿಗೆ ಶಾಕ್ ತಂದಿವೆ. “ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿಬಿಡಿ” ಎಂದು ಸರ್ಕಾರಕ್ಕೆ ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ಮಂಗಳೂರು ಹೊರವಲಯದಲ್ಲಿರುವ ಪಿಲಿಕುಳ ಮೃಗಾಲಯ ಸುಮಾರು 370 ಎಕರೆ ವಿಸ್ತೀರ್ಣದ ನಿಸರ್ಗಧಾಮವಾಗಿದ್ದು, ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ವನ್ಯಜೀವಿಗಳಿಗೆ ಆಶ್ರಯ ನೀಡುವ ಪ್ರಮುಖ ಕೇಂದ್ರವಾಗಿದೆ. ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದ್ದ ಈ ಮೃಗಾಲಯ ಇಂದು ತುಕ್ಕು ಹಿಡಿದ ಪಂಜರಗಳು, ಕಲುಷಿತ ನೀರು, ಅಶುಚಿ ವಾತಾವರಣ ಮತ್ತು ಮೇಲಿಂದ ಮೇಲೆ ಪ್ರಾಣಿಗಳ ಸಾವುಗಳಿಂದ ಆತಂಕಕಾರಿ ಸ್ಥಿತಿಗೆ ತಲುಪಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನೊಂದು ಗಂಭೀರ ಅಂಶವೆಂದರೆ, ಪಿಲಿಕುಳ ಮೃಗಾಲಯದ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೆ ಮುಕ್ತಾಯಗೊಂಡಿದ್ದರೂ, ಯಾವುದೇ ಮಾನ್ಯ ಪರವಾನಗಿ ಇಲ್ಲದೇ ಮೃಗಾಲಯ ಕಾರ್ಯನಿರ್ವಹಿಸುತ್ತಿರುವುದು. ಈ ಅವ್ಯವಸ್ಥೆ ಕುರಿತು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರವು 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ದರೂ, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಅರ್ಜಿದಾರರ ಆರೋಪವಾಗಿದೆ. ಮಲಿನ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೇ ಅನೇಕ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಮೃಗಾಲಯದ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದ್ದು ಅದು ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು. ಅಲ್ಲದೆ ಆರೋಪಗಳಿಗೆ ಉತ್ತರಿಸಲು ಸಮಯಾವಕಾಶ ಕೋರಿದರು. ಆದರೆ ನ್ಯಾಯಾಲಯ ಪ್ರಾಣಿಗಳ ರಕ್ಷಣೆಯೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿ, ಸೂಕ್ತ ನಿರ್ವಹಣೆ ಸಾಧ್ಯವಾಗದಿದ್ದರೆ ಮೃಗಾಲಯವನ್ನು ಮುಚ್ಚುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.