ಹಾಸನ/ಬೆಂಗಳೂರು, ಏ.05: ಕವಿ, ಕನ್ನಡ ಉಪನ್ಯಾಸಕ, ಸಾಹಿತ್ಯ-ಸಾಂಸ್ಕೃತಿಕ ಸಂಘಟಕ ಹಾಗೂ ಸಮಾಜಮುಖಿ ಚಿಂತಕರಾದ ಡಾ. ಸಿಸಿರಾ ಅವರ ಜನ್ಮದಿನದ ಅಂಗವಾಗಿ ರಾಜ್ಯದಾದ್ಯಂತ ಶಿಷ್ಯರು, ಸಾಹಿತ್ಯಾಸಕ್ತರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

1973ರ ಏಪ್ರಿಲ್ 5ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಸಿದ್ಧನಹಳ್ಳಿಯಲ್ಲಿ ರೈತ ಕಾರ್ಮಿಕರಾದ ಸಿದ್ದೇಗೌಡ ಹಾಗೂ ಪದ್ಮಾ ದಂಪತಿಗೆ ಜನಿಸಿದ ಡಾ. ಸಿಸಿರಾ ಅವರ ಪೂರ್ಣ ಹೆಸರು ಸಿದ್ಧನಹಳ್ಳಿ ಸಿದ್ದೇಗೌಡ ರಾಮಲಿಂಗೇಶ್ವರ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ಪದವಿ ಪಡೆದಿರುವ ಅವರು, ಪ್ರತಿಷ್ಠಿತ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶಿಷ್ಟ ಗುರುತಿಸಿಕೊಂಡಿದ್ದಾರೆ.

ಕುವೆಂಪು ಅವರ ಮಂತ್ರ ಮಾಂಗಲ್ಯ ಸಾಹಿತ್ಯದ ಆಶಯದಂತೆ ಎಂ.ಎ. ಪದವೀಧರೆ ಸಿ. ಹೇಮಾವತಿ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿರುವ ಡಾ. ಸಿಸಿರಾ, ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿ, ಗಾಂಧೀಜಿ, ವಿವೇಕಾನಂದ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಚಿಂತನೆಗಳನ್ನು ಯುವಜನತೆ ಮತ್ತು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ‘ಚೈತ್ರ ಚಿತ್ತಾರ’, ‘ಪ್ರೇಮ ಗಂಗೆ’, ‘ಸ್ವಾತಂತ್ರ್ಯಾನಂತರ’, ‘ಸೋನೆಮಳೆ’, ‘ತಾಯಿ ನಾಡು’, ‘ನಿನ್ನ ಪ್ರೀತಿಯ ಹಿಂದೆ’, ‘ಭೂಮಿ ತಬ್ಬಿದ ಆಕಾಶ’ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.
ಡಾ. ಸಿಸಿರಾ ಅವರ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವಿಸಿ ಅಭಿನಂದಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಮಯೂರ ವರ್ಮ’ ದತ್ತಿ ಪ್ರಶಸ್ತಿ, ನಾಡೋಜ ಹಂಪನಾ ಅವರಿಂದ ‘ಜನೋಪಕಾರಿ’ ಬಿರುದು, ವಿದ್ವಾನ್ ಮಲ್ಲೇಪುರಂ ಜಿ. ವೆಂಕಟೇಶ್ ಅವರಿಂದ ‘ಕನ್ನಡ ಮಾಣಿಕ್ಯ’ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಸದಾ ಒಂದಿಲ್ಲೊಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ದತ್ತಿ ಪ್ರಶಸ್ತಿ ಹಾಗೂ ಗೌರವ ಸನ್ಮಾನ ನೀಡಿ ಪ್ರೋತ್ಸಾಹಿಸುತ್ತಿರುವ ಡಾ. ಸಿಸಿರಾ, ಆದರ್ಶಮಯ ಬದುಕಿನ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದಾರೆ.

“ನುಡಿದಂತೆ ನಡೆದು, ನಡೆದಂತೆ ನುಡಿದು ಆದರ್ಶ ಜೀವನ ನಡೆಸುತ್ತಿರುವ ನಮ್ಮ ಪ್ರೀತಿಯ ಗುರುಗಳಾದ ಡಾ. ಸಿಸಿರಾ ಅವರು ನೂರ್ಕಾಲ ಸುಖವಾಗಿ ಬಾಳಲಿ” ಎಂದು ಉದ್ಯಮಿ ಎ.ವಿ. ಗುರುತೇಜಸ್, ನೆಲಮಂಗಲ ಶುಭ ಹಾರೈಸಿದ್ದಾರೆ.
