ಹಾಸನ, ಫೆ.14: ನಗರದಲ್ಲಿ ಎಂಡಿಎಂ (MDMA) ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ನಗರದ ರಾಜ್ಕುಮಾರ್ ನಗರ ಬಳಿಯ ಚೆಕ್ಪೋಸ್ಟ್ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಿದ ವೇಳೆ ಆರೋಪಿಗಳಿಂದ ಸುಮಾರು ₹2 ಲಕ್ಷ ಮೌಲ್ಯದ 40 ಗ್ರಾಂ ಎಂಡಿಎಂ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ಎರ್ಟಿಗಾ ಕಾರನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಪರ್ವೀಜ್ (29), ಸುಹೇಲ್ (24), ಅಬ್ದುಲ್ ಯಾಸಿನ್ (20), ಇಬ್ರತ್ ಖಾನ್ (24) ಮತ್ತು ಸೈಯದ್ ಯೂಸಫ್ (23) ಎಂದು ಗುರುತಿಸಲಾಗಿದೆ. ಇವರಲ್ಲಿ ನಾಲ್ವರು ಶಿವಮೊಗ್ಗ ಮೂಲದವರಾಗಿದ್ದು, ಒಬ್ಬ ಹಾಸನ ಮೂಲದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಪಿಐ ಸ್ವಾಮಿನಾಥ್ ಹಾಗೂ ಪಿಎಸ್ಐ ರವಿಶಂಕರ್ ನೇತೃತ್ವದಲ್ಲಿ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್ ಮತ್ತು ಹನುಮೇಶ್ ಸಿಬ್ಬಂದಿ ಭಾಗವಹಿಸಿದ್ದರು.
ಈ ಸಂಬಂಧ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
