ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ಟೇಬಲ್ (PC) ನೇಮಕಾತಿ ಪ್ರಕ್ರಿಯೆಗೆ ಮತ್ತೆ ಚುರುಕು ಸಿಕ್ಕಿದ್ದು, ಕೆಲವು ಘಟಕಗಳ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಕಾರದ ಆದೇಶದಂತೆ 6 ಶೇಕಡಾ ಹುದ್ದೆಗಳನ್ನು ಮೀಸಲಿರಿಸಿ ರೋಸ್ಟರ್ ಪ್ರಕ್ರಿಯೆ ಪೂರ್ಣಗೊಳಿಸಿ ಇದೇ ಮಾರ್ಚ್ 20ರೊಳಗೆ ಸಲ್ಲಿಸುವಂತೆ ಸಂಬಂಧಿತ ಘಟಕಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದೇ ಹಿನ್ನೆಲೆಯಲ್ಲಿ ಪೊಲೀಸ್ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಲ್ಲಿ ಮತ್ತೆ ಆಶಾಭಾವನೆ ಮೂಡಿದೆ. ಇಲಾಖಾ ಮೂಲಗಳ ಪ್ರಕಾರ, ಒಳ ಮೀಸಲಾತಿ ವಿಷಯದಲ್ಲಿ ಪ್ರಭಾವಿ ಸಚಿವರು ಅಥವಾ ಸರ್ಕಾರದ ಮಟ್ಟದಲ್ಲಿ ಯಾವುದೇ ಹಸ್ತಕ್ಷೇಪ ನಡೆಯದಿದ್ದರೆ, ಇದೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಪೊಲೀಸ್ ಇಲಾಖೆ ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಹೆಚ್ಚಾಗಿದೆ.
ನೇಮಕಾತಿ ಪ್ರಕ್ರಿಯೆ ಕುರಿತು ಅಧಿಕೃತ ಅಧಿಸೂಚನೆ ಹೊರಬೀಳುವವರೆಗೆ ಅಭ್ಯರ್ಥಿಗಳು ತಾಳ್ಮೆಯಿಂದ ಕಾಯುವಂತೆ ಹಾಗೂ ಇಲಾಖೆಯ ಅಧಿಕೃತ ಪ್ರಕಟಣೆಗಳನ್ನೇ ಗಮನಿಸುವಂತೆ ಮೂಲಗಳು ಸೂಚಿಸಿವೆ.
ರಾಜ್ಯದಲ್ಲಿ ಬಹುಕಾಲದಿಂದ ನಿರೀಕ್ಷೆಯಲ್ಲಿರುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಸಂಬಂಧಿತ ಈ ಬೆಳವಣಿಗೆ, ಸಾವಿರಾರು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.
