ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಡಿದ ಆರೋಪದಲ್ಲಿ ಐವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು (ಸಸ್ಪೆಂಡ್) ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಘಟನೆ ನಡೆದಿರುವುದು ಕಲ್ಬುರ್ಗಿ ಜಿಲ್ಲೆಯ ಚಿತ್ರಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ. ಎಸ್ಪಿ ಅಡ್ಡೂರು ಶ್ರೀನಿವಾಸುಲು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ.
ವಾಡಿ ಠಾಣೆಯ ಎಎಸ್ಐ ಮಹಿಮೂದ್ ಮಿಯಾ, ಹೆಡ್ ಕಾನ್ಸ್ಟೆಬಲ್ಗಳಾದ ನಾಗರಾಜ, ಸಾಯಿಬಣ್ಣ, ಇಮಾಮ್ ಮತ್ತು ಕಾನ್ಸ್ಟೆಬಲ್ಗಳಾದ ನಾಗಭೂಷಣ್ ಅವರನ್ನು ಅಮಾನತು ಮಾಡಲಾಗಿದೆ. ಪಿಎಸ್ಐ ತಿರುಮಲೇಶ್ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.
ಈ ಘಟನೆಯ ಏಳು ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕರ್ತವ್ಯದ ಸಮಯದಲ್ಲಿ ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿ ಇಬ್ಬರು ಅಧಿಕಾರಿಗಳು ತಮ್ಮ ಸಮವಸ್ತ್ರದಲ್ಲಿ ಇಸ್ಪೀಟು ಆಡುತ್ತಿರುವುದನ್ನು ತೋರಿಸಿದೆ. ಈ ವೀಡಿಯೊ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವನ್ನುಂಟುಮಾಡಿತು.
ಚಿತ್ತಾಪುರ ಸ್ಥಾನವನ್ನು ಪ್ರತಿನಿಧಿಸುವ ಸಚಿವ ಪ್ರಿಯಾಂಕ್ ಖರ್ಗೆ, ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು. ಈ ಘಟನೆ ಹಲವಾರು ತಿಂಗಳ ಹಿಂದೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ಇಲಾಖೆ ಸಿಬ್ಬಂದಿ ಅಥವಾ ಅಧಿಕಾರಿಗಳ ಯಾವುದೇ ಶಿಸ್ತು ಉಲ್ಲಂಘನೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ, ಸಾರ್ವಜನಿಕ ಸೇವೆ ಮತ್ತು ಕಾನೂನು ಜಾರಿಯಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಒತ್ತಿ ಹೇಳಿದರು.
