ಹಾಸನ- ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರಜಾ ಶಕ್ತಿ ಸಂಘಟನೆಯ ವತಿಯಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆಯ ಸಂಸ್ಥಾಪಕ ಮಿಲಿಟರಿ ಮಂಜು ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಬಳಿ ನಿರ್ಮಾಣವಾಗಿರುವ ಮುರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ, ಅಲ್ಲದೆ ಕಳಪೆ ಕಾಮಗಾರಿಯೂ ನಡೆದಿದೆ ಇದರ ಬಗ್ಗೆ ಈ ಹಿಂದಿನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಳಪೆ ಕಾಮಗಾರಿ ಬೆಳಕಿಗೆ ಬಂದಿತ್ತು ತಕ್ಷಣ ಅವರು ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದರು ಆದರೆ ಈವರೆಗೂ ತನಿಖೆ ನಡೆದಿಲ್ಲ ಎಂದರು.
ಸುತ್ತಮುತ್ತ ಅರಣ್ಯ ಪ್ರದೇಶದ ನಡುವೆ ನಿರ್ಮಾಣವಾಗಿರುವ ಶಾಲೆಯು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯೋಗ್ಯವಾಗಿಲ್ಲ ಅಲ್ಲದೆ ವನ್ಯ ಮೃಗಗಳಿಂದ ಯಾವುದೇ ರಕ್ಷಣೆಯು ಇಲ್ಲ. ಜಿಲ್ಲಾಧಿಕಾರಿಗಳು ಎತ್ತರದ ಕಾಂಪೌಂಡ್ ನಿರ್ಮಿಸಿ ರಕ್ಷಣೆ ನೀಡುವಂತೆ ಸೂಚನೆ ನೀಡಿದ್ದರು ಈವರೆಗೂ ಸುಸಜ್ಜಿತ ಕಾಂಪೌಂಡ್ ನಿರ್ಮಾಣವಾಗಿಲ್ಲ ಆದರೆ ಅಧಿಕಾರಿಗಳು ತರಾತುರಿಯಲ್ಲಿ ಶಾಲೆಯನ್ನು ತೆರೆದು ಈಗಾಗಲೇ ಸುಮಾರು 400ಕ್ಕೂ ಹೆಚ್ಚು ಮಕ್ಕಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ ಅವರಿಗೆ ಯಾವುದೇ ರೀತಿಯ ತೊಂದರೆಯಾದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.
ಶಾಲೆ ನಿರ್ಮಾಣ ಮಾಡಿರುವ ಗೂಳಿಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 110ರಲ್ಲಿ ಸರಿಯಾಗಿ ಅಳತೆ ಮಾಡಿ ದುರಸ್ತಿ ಮಾಡದೆ ರೈತರ ಜಮೀನಿನಲ್ಲಿ ಕಟ್ಟಡ ಕಟ್ಟಿ ಅವರಿಗೂ ಸರಿಯಾದ ಪರಿಹಾರ ನೀಡದೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯ ಒದಗಿಸಿಲ್ಲ ಮತ್ತು ಕ್ರೀಡಾಂಗಣದ ವ್ಯವಸ್ಥೆಯು ಇಲ್ಲದಿರುವುದು ಬೇಸರ ತಂದಿದೆ ಎಂದು ಹೇಳಿದರು.
ನಿಯಮಾನುಸಾರ ಕೆಲಸ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಕಾಮಗಾರಿ ಸಂಪೂರ್ಣವಾಗಿ ಮುಗಿಯದೆ ಇದ್ದರೂ ಈಗಾಗಲೇ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳಲಾಗಿದೆ. ಹಳ್ಳ, ದಿಣ್ಣೆ ಹಾಗೂ ಅರಣ್ಯದೊಳಗಿರುವ ಶಾಲೆಯಿಂದ ಮಕ್ಕಳಿಗೆ ಭದ್ರತೆ ಇಲ್ಲ ಯಾವುದಾದರೂ ಸಮಸ್ಯೆ ಆದರೆ ಜಿಲ್ಲಾಡಳಿತದ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ಮುಖಂಡರಾದ ಮಹಾಲಿಂಗೇಗೌಡ, ಚಂದ್ರೇಗೌಡ, ಕುಸುಮ, ಶಶಿಕಲಾ, ಪೃಥ್ವಿರಾಜ್ ಇತರರು ಇದ್ದರು.

[…] […]
[…] […]