ಹಾಸನ: ಮಹಿಳೆ ಅತ್ಯಾಚಾರ, ಅಪಹರಣ ಕೇಸ್ನಲ್ಲಿ ಪ್ರಜ್ವಲ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿರುವುದು ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ತಿಂಗಳಿನಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ, ಕಾಲ ವಿಳಂಬವಾದಾಗ ಅಪರಾಧಿಗಳು ತಪ್ಪಿಸಿಕೊಳ್ಳಲು ದಾರಿ ಸಿಗುತ್ತದೆ, ಪ್ರಜ್ವಲ್ ರೇವಣ್ಣ ಅವರ ವಕೀಲರು ಎಡವಿದ್ದು, ಸಮರ್ಥವಾಗಿವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ರಾಜಕೀಯ ಕುಟುಂಬ ಅಧಿಕಾರ, ಹಣದ ಬಲದ ಎದುರು ನ್ಯಾಯಾಂಗ ತೀರ್ಪು ಕೊಟ್ಟಿದೆ, ಕಾನೂನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರೇವಣ್ಣ ಕುಟುಂಬದವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ, ನಂಬಿಕೆ ಅನ್ನುವ ಪದಕ್ಕೆ ರೇವಣ್ಣ ಕುಟುಂಬದವರು ಅನರ್ಹರು ಎಂದು ನಾನು ಹೇಳುತ್ತಲೇ ಬಂದಿದ್ದೆ. ಆದರೆ ಹಣ, ಅಧಿಕಾರದ ಬಲ ನಡೆಯುವುದಿಲ್ಲ ಎಂಬುದು ಈ ತೀರ್ಪಿನಿಂದ ಗೊತ್ತಾಗಿದೆ ಎಂದು ನುಡಿದರು.
ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಬಂದಿದೆ, ಕಾನೂನು ಮುಂದೆ ಯಾರೂ ದೊಡ್ಡವರಲ್ಲ, ತಲೆ ಬಾಗಲೇಬೇಕು, ವಕೀಲರ ಬಗ್ಗೆ, ನ್ಯಾಯಾಲಯದ ಬಗ್ಗೆ ಅನುಮಾನ ದೂರವಾಗಿದೆ. ನಿಜವಾದ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ. ವಕೀಲರು ಸಾಕ್ಷಿಗಳನ್ನು ಕ್ರೂಢೀರಣ ಮಾಡುವಲ್ಲಿ ಎಡವಿದ್ದಾರೆ, ಪ್ರಜ್ವಲ್ ಕಣ್ಣೀರು ಹಾಕಿದ್ರು ಎಂದು ಭಾವುಕರಾಗಬಾರದು, ಅವರಿಂದ ಎಷ್ಟು ಹೆಣ್ಣು ಮಕ್ಕಳು ಜೀವನ ಹಾಳಾಗಿ, ಎಷ್ಟೋ ಕುಟುಂಬಗಳು ಹಾಳಾಗಿವೆ ಎಂದರು.
