ಹಾಸನ: ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿ ಮಹಿಳೆಗೆ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೃತೆ ಶೃತಿ ಅವರ ಪತಿ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹಾಸನ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಹೆಂಡತಿಗೆ ಹೆರಿಗೆ ನೋವು ಬರುತ್ತಿದೆ ಎಂದು ಹಲವು ಬಾರಿ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದೇವೆ. ಆದರೆ ಯಾರೂ ಸರಿಯಾಗಿ ಗಮನ ಕೊಡಲಿಲ್ಲ. ‘ನೋವು ಬರುತ್ತಿದ್ದರೆ ತಡೆದುಕೊಳ್ಳಬೇಕು’, ‘ಗಂಡನ ಜೊತೆ ಇದ್ದಾಗ ಚೆನ್ನಾಗಿತ್ತು, ಈಗ ತಾಳಲು ಆಗಲ್ವಾ’ ಎಂಬ ರೀತಿಯಲ್ಲಿ ಅವಮಾನಕರವಾಗಿ ಮಾತನಾಡಿದ್ದಾರೆ. ನನ್ನ ಹೆಂಡತಿ ಅತ್ತುತ್ತಾ ಫೋನ್ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ,” ಎಂದು ಕಣ್ಣೀರಿಟ್ಟರು.
ಭಾನುವಾರ ದಿನವಾಗಿದ್ದ ಕಾರಣ ಯಾವುದೇ ವೈದ್ಯರು ಬಂದು ಪರೀಕ್ಷಿಸಲೇ ಇಲ್ಲ ಎಂದು ಅವರು ದೂರಿದರು. “ಯಾರಾದರೂ ಬಂದು ನೋಡಿರಿ ಎಂದು ಮರುಮರು ಫೋನ್ ಮಾಡಿದರೂ ಸ್ಪಂದನೆ ಇರಲಿಲ್ಲ. ನಾನು ಇಲ್ಲಿ ಯಾವುದೇ ಪರಿಹಾರಕ್ಕಾಗಿ ಬಂದಿಲ್ಲ. ನನಗೆ ಆದ ಅನ್ಯಾಯ ಮತ್ತಾರಿಗೂ ಆಗಬಾರದು ಎಂಬ ಕಾರಣಕ್ಕೆ ನ್ಯಾಯ ಕೇಳುತ್ತಿದ್ದೇನೆ,” ಎಂದು ಹೇಳಿದರು.
ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿದವರನ್ನು ಅಮಾನತು ಮಾಡಿ, ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು. ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಕೂಡ ತಿಳಿಸಿದ್ದಾರೆ.
ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಆರೋಗ್ಯ ಸೇವೆಗಳ ಗುಣಮಟ್ಟ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.
