ಚಾಮರಾಜನಗರ, ಜುಲೈ 9 – ಐತಿಹಾಸಿಕ ಚಾಮರಾಜೇಶ್ವರ ರಥೋತ್ಸವಕ್ಕೆ ಒಂದು ದಿನ ಮಾತ್ರ ಬಾಕಿಯಿರುವಾಗ, ನಗರದಲ್ಲಿ ಉತ್ಸವದ ಪೂರ್ವಭಾವಿ ಸಿದ್ಧತೆಗಳು ಜೋರಾಗಿವೆ. ದೇವಸ್ಥಾನದ ಆಡಳಿತ ಮಂಡಳಿಯ ನೌಕರರು ಹಾಗೂ ಯುವಕರು ಕಳೆದ ಒಂದು ವಾರದಿಂದ ಉತ್ಸಾಹದಿಂದ ತೇರು ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗುರುವಾರ ನಡೆಯಲಿರುವ ರಥೋತ್ಸವದ ಅಂಗವಾಗಿ, ತೇರಿಗೆ ಹೂ, ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ.

ಸಾಂಪ್ರದಾಯಿಕವಾಗಿ ತೇರು ಸಾಗುವ ಹಾದಿಯಲ್ಲಿ ಭಕ್ತರು ಸುಲಭವಾಗಿ ಎಳೆಯುವಂತೆ ನಗರಸಭೆ ಮರಳು ಹರಡುವುದು ರೂಢಿ. ಕಲ್ಲು ಮಿಶ್ರಿತ ಮರಳನ್ನು ಈಗಾಗಲೇ ಹಾಕುವ ಕಾರ್ಯ ಪ್ರಾರಂಭವಾಗಿದ್ದು, ಆದರೆ ಈ ಬಾರಿ ಬಳಸಲಾಗುತ್ತಿರುವ ಮರಳಿನಲ್ಲಿ ಕಲ್ಲುಗಳು ಹೆಚ್ಚಾಗಿರುವುದು, ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದೆ.

ಬರೀ ಕಾಲಿನಲ್ಲಿ ತೇರು ಎಳೆಯುವ ಭಕ್ತರಿಗೆ, ಇದು ಅಪಾಯವಾಗುವ ಸಾಧ್ಯತೆ ಹೆಚ್ಚಿದ್ದು, ನಗರಸಭೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಸುರಕ್ಷತೆ ಹಾಗೂ ಉತ್ಸವದ ಸುಗಮತೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಲ್ಲುಗಳನ್ನು ತೆಗೆಸುವ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
– ವರದಿ: ನಮ್ಮ ಪ್ರತಿನಿಧಿ, ಚಾಮರಾಜನಗರ
