ರಾಮನಾಥಪುರ/ತುಮಕೂರು, ಮಾ.31:
ನಡೆದಾಡುವ ದೇವರು, ಕಲಿಯುಗ ಬಸವಣ್ಣ, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಸಿದ್ಧಗಂಗಾ ಮಠದ ಲಿಂಗೈಕ್ಯ ಮಠಾಧ್ಯಕ್ಷರಾದ ಡಾ. ಶ್ರೀಶ್ರೀ ಶಿವಕುಮಾರಸ್ವಾಮೀಜಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ಏಪ್ರಿಲ್ 1ರಂದು ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ ಎಂದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 1ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿರುವ ಮುಖ್ಯ ಕಾರ್ಯಕ್ರಮಕ್ಕೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಮುಖ್ಯ ಅತಿಥಿಯಾಗಿ ಆಗಮಿಸಿ ಗುರುವಂದನಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ಮೈಸೂರಿನ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ದಿವ್ಯ ನೇತೃತ್ವ ವಹಿಸಲಿದ್ದು, ಶ್ರೀ ಶಿವಸಿದ್ದೇಶ್ವರಸ್ವಾಮೀಜಿಗಳು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ರಾಜ್ಯದ ಸಚಿವರಾದ ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್ ಗೌಡ, ಟಿ.ಬಿ. ಜಯಚಂದ್ರ, ಕೆ.ಎನ್. ರಾಜಣ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.

ಪ್ರತಿ ವರ್ಷದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆಗಳು, ಬೆಳಿಗ್ಗೆ 8 ಗಂಟೆಗೆ ಶ್ರೀಗಳ ಪುತ್ಥಳಿ ಮೆರವಣಿಗೆ ಶ್ರೀಮಠದ ಆವರಣದಲ್ಲಿ ನಡೆಯಲಿದೆ.
ಅದೇ ರೀತಿ 119 ಮಹಿಳೆಯರಿಂದ ವಚನಗಾಯನ, ವೀಣಾವಾದನ ಸೇರಿದಂತೆ ಹಲವು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಗ್ಗೆಯಿಂದ ರಾತ್ರಿ ತನಕ ಸುಮಾರು 1 ಲಕ್ಷ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಭಕ್ತರು ಹಾಗೂ ಗಣ್ಯರು ಬೆಳಿಗ್ಗೆ 10.30ರೊಳಗೆ ನಿಗದಿತ ಸ್ಥಳಗಳಲ್ಲಿ ಆಸೀನರಾಗಬೇಕು ಎಂದು ಕೋರಿದ ಅವರು, ಭಕ್ತರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ ಎಂದರು.
ಶ್ರೀಮಠದ ಮುಖ್ಯ ದ್ವಾರದಿಂದ ಕಾರ್ಯಕ್ರಮ ಸ್ಥಳಕ್ಕೆ, ರೈಲು ನಿಲ್ದಾಣ ಹಾಗೂ ಕ್ಯಾತ್ಸಂದ್ರ ಬಸ್ ನಿಲ್ದಾಣ ಕಡೆಯಿಂದ ಬರುವ ಭಕ್ತರು ರೈಲ್ವೆ ಕೆಳಸೇತುವೆ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ಅದೇ ವೇಳೆ ಭಕ್ತರ ಸಂಚಾರಕ್ಕೆ ಐದು ಮಿನಿ ಬಸ್ಗಳ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಜಂಟಿ ಕಾರ್ಯದರ್ಶಿ ಡಾ. ಬಿ. ಶಿವಕುಮಾರಯ್ಯ, ಆಡಳಿತಾಧಿಕಾರಿ ಕೆ.ಎಸ್. ವಿಶ್ವನಾಥಯ್ಯ, ಸಿಇಓ ಜಯವಿಭವಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
