ಚನ್ನಪಟ್ಟಣ : ಗಡಿ ಗ್ರಾಮ ಸಿದ್ಧನಹಳ್ಳಿಗೆ ನೀರಾವರಿ ಸೌಲಭ್ಯಕ್ಕೆ ಆದ್ಯತೆ ನೀಡಿ ದನಕರುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಯಿಂದ ವ್ಯವಸಾಯದ ಅನುಕೂಲವಾಗುವಂತೆ
ಊರಿನ ನಾಲ್ಕು ಕಟ್ಟೆಗಳಿಗೆ ಪೈಪ್ ಅಳವಡಿಸಿ ಅತೀ ಶೀಘ್ರದಲ್ಲಿ ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕಿನ ಶಾಸಕರಾದ ಸಿ.ಪಿ.ಯೋಗೇಶ್ವರ್ ಅವರು ಭರವಸೆ ನೀಡಿದರು.
ಅವರು ತಾಲ್ಲೂಕಿನ ಗಡಿ ಗ್ರಾಮ ಸಿದ್ಧನಹಳ್ಳಿಯಲ್ಲಿ ಶ್ರೀ ಯೋಗನರಸಿಂಹ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿಯು ಶ್ರೀ ಕಬ್ಬಾಳಮ್ಮ ದೇವಿ ಹಬ್ಬದ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ “ದಕ್ಷಯಜ್ಞ ಅಥವಾ ಭೃಗುಮುನಿಯ ಗರ್ವಭಂಗ ” ಎಂಬ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಮಂಡ್ಯ, ತುಮಕೂರು, ಬೆಂಗಳೂರು ದಕ್ಷಿಣ ಹೀಗೆ ಮೂರು ಜಿಲ್ಲೆಗಳ ಗಡಿಯಾಗಿರುವ ಕಾರಣಕ್ಕೋ ಅಥವಾ ಹತ್ತು ಹಲವು ಇಚ್ಚಾಶಕ್ತಿಯ ಕೊರತೆಯ ಕಾರಣಕ್ಕೋ ಏನೋ ಈ ಊರಿಗೆ ನೀರಾವರಿ ಯೋಜನೆಯ ಸೌಲಭ್ಯ ದೊರೆಯದಿರುವುದು ವಿಷಾದನೀಯ ಎಂದರು.

ಮುಂದಿನ ದಿನಗಳಲ್ಲಿ ಗಡಿ ಗ್ರಾಮ ಅಭಿವೃದ್ಧಿಗೆ ಶಾಸಕರ ವಿಶೇಷ ಅನುದಾನ ಬಳಸಿ ಈ ಊರಿನ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೂ ಕೈ ಜೋಡಿಸಿ ಈಡೇರಿಸುವುದಾಗಿ ಯೋಗೇಶ್ವರ್ ಅವರು ಊರಿನ ಜನತೆಗೆ ಮಾತು ಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಊರಿನ ಹಿರಿಯ ಮುಖಂಡರಾದ ಡಿ.ಚಿಕ್ಕತಿಮ್ಮಯ್ಯ ಅವರು ಗ್ರಾಮದಲ್ಲಿ ಅತೀ ತುರ್ತಾಗಿ ಆಗಬೇಕಿರುವ ನೀರಾವರಿ ಮತ್ತು ದೇವಾಲಯ ನಿರ್ಮಾಣಕ್ಕೆ ಸರ್ಕಾರದ ಸಹಾಯ ಸಹಕಾರ ಪ್ರೋತ್ಸಾಹ ನೀಡುವಂತೆ ಶಾಸಕರಲ್ಲಿ ಗ್ರಾಮದ ಮುಖಂಡರ ಪರವಾಗಿ ಮನವಿ ಸಲ್ಲಿಸಿದರು. ಶಾಸಕರು ಊರಿನ ಮೇಲಿನ ಅಭಿಮಾನಕ್ಕೆ ಗೌರವ ನೀಡಿ ಬಂದಿದ್ದಾರೆ ಎಂದು ಹೇಳಿ ಶಾಸಕರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ
ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ್ ಮಾತನಾಡಿ ಅನೇಕ ಸವಲತ್ತುಗಳಿಂದ ವಂಚಿತವಾಗಿರುವ ಸಿದ್ಧನಹಳ್ಳಿಗೆ ಇನ್ನು ಮುಂದಾದರೂ ರಾಜಕೀಯವನ್ನು ಚುನಾವಣೆ ಸಮಯದಲ್ಲಿ ಮಾತ್ರ ತಮಗೆ ಬೇಕಾದವರಿಗೆ ಮತ ನೀಡಿ ಗೆಲ್ಲಿಸಿಕೊಳ್ಳಿ ಆದರೆ ಚುನಾವಣೆ ಮುಗಿದ ಮೇಲೆ ಶಾಸಕರು , ಪಂಚಾಯಿತಿ ಸದಸ್ಯರಾದಿಯಾಗಿ ಎಲ್ಲರೂ ಓಟು ಹಾಕಿದವರಿಗೆ ಹಾಗೂ ಹಾಕಿದವರಿಗೆ ಇಬ್ಬರಿಗೂ ಬೇಕಾದವರಾಗಿ ಮಾಡಿಕೊಂಡು ಊರಿನ ಅಭಿವೃದ್ಧಿ ಕಡೆಗೆ ಗಮನಿಸುವಂತೆ ಹಿತವಚನ ನುಡಿದರು. ಹಾಗೆಯೇ ರಂಗಭೂಮಿಯು ಅನೇಕ ಪ್ರಸಿದ್ಧ ನಟರನ್ನು ಬೆಳೆಸಿದೆ, ಇಂದಿಗೂ ಜೀವಂತವಾಗಿರುವ ಗ್ರಾಮೀಣ ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಹೆಚ್ಚು ಸಹಾಯ ಸಹಕಾರ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ ಎಂದರು.
ವೇದಿಕೆಯಲ್ಲಿ ಕದರಮಂಗಲ ಎಸ್ .ಟಿ.ಎಸ್.ಗ್ರೂಪ್ ನ ಕೆ.ರಮೇಶ್, ಪಿ.ಎಲ್ಡಿ ಬ್ಯಾಂಕ್ ನ ನಿರ್ದೇಶಕ ಮಾಗನೂರು ಗಂಗರಾಜು, ಎಂ.ಬಿ.ಹಳ್ಳಿ.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಿಮ್ಮರಾಯಿಗೌಡ, ಹಿರಿಯ ವಕೀಲರಾದ ಎಸ್.ಪಿ.ಪ್ರದೀಪ್ ಕುಮಾರ್, ಬೇವೂರು ಗ್ರಾ. ಪಂ.ಮಾಜಿ ಅಧ್ಯಕ್ಷ ಗೌಡಗೆರೆ ರಮೇಶ್ ಸೇರಿದಂತೆ ಜೆಡಿಎಸ್,ಕಾಂಗ್ರೆಸ್, ಬಿಜೆಪಿ ಯ ಹತ್ತಾರು ಮುಖಂಡರು ಭಾಗವಹಿಸಿದ್ದರು .
ಬೆಳ್ಳೂರು ಕ್ರಾಸ್ ನ ಡಿ.ಸಿ.ಪುಟ್ಟರಾಜು ಅವರ ಸಂಗೀತ ನಿರ್ದೇಶನದಲ್ಲಿ ನಾಟಕದಲ್ಲಿ 20 ಕ್ಕೂ ಹೆಚ್ಚಿನ ಕಲಾವಿದರುಗಳಾದ ಅನಂತಣ್ಣರ ಪುಟ್ಟಲಿಂಗು ಚಂದ್ರಮ, ಎಸ್.ಎಂ.ಪ್ರಕಾಶ್ ಈಶ್ವರ, ಅರ್ಜುನ್ ಶಂಕರ್ ವಿಷ್ಣು, ಶಶಿಕುಮಾರ್ ನಾರದ, ವಕೀಲರಾದ ಎಸ್.ಕೆಂಪೇಗೌಡರ ಸೂತ್ರಧಾರಿ ಪಾತ್ರಗಳು ಸೇರಿದಂತೆ ಎಲ್ಲಾ ಕಲಾವಿದರು ಅತ್ಯುತ್ತಮ ಅಭಿನಯ ಪ್ರದರ್ಶನವು ಸಾವಿರಾರು ಸಹೃದಯ ರಂಗರಸಿಕರ ಮನಸೂರೆಗೊಂಡಿತು.
ಕೇಕೆ, ಸಿಳ್ಳೆ ಜನರ ನಾಟಕಾಭಿರುಚಿಯನ್ನು ಹೆಚ್ಚಿಸಿತು. ಗ್ರಾಮದ ಮುಖಂಡರಾದ ಚೆಲುವೇಗೌಡರ ಸಿದ್ಧರಾಜು, ಎಸ್.ಕೆ.ಚಂದ್ರು, ಪಟೇಲ್ ಚಂದ್ರು, ಕುರಿಹಟ್ಟಿ ಸಿದ್ಧಲಿಂಗಯ್ಯ, ಹುಚ್ಚಣ್ಣನವರ ಪುಟ್ಟಲಿಂಗು, ಮುಂತಾದವರು ವೇದಿಕೆಯಲ್ಲಿದ್ದರು.
