ಹೊಳೆನರಸೀಪುರ (ಹಾಸನ ಜಿಲ್ಲೆ), ಜುಲೈ 10: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆಯೇ ವ್ಯಕ್ತಿಯೊಬ್ಬ ತನ್ನ ತಂದೆ ಹಾಗೂ ಅಣ್ಣನನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. ಇದರಿಂದ ಗ್ರಾಮದಲ್ಲಿ ಭಯ ಮತ್ತು ಆತಂಕದ ವಾತಾವರಣ ಮೂಡಿದೆ.
ಕೊಲೆಯಾದವರು ದೇವೇಗೌಡ (70) ಹಾಗೂ ಅವರ ಮಗ ಮಂಜುನಾಥ್ (50) ಎಂದು ಗುರುತಿಸಲಾಗಿದೆ. ಇವರನ್ನು ಅವರದೇ ಸ್ವಂತ ತಮ್ಮ ಮೋಹನ್ (47) ಎಂಬಾತ ಕುಡಿದ ಮತ್ತಿನಲ್ಲಿ ತಲೆಗೆ ಮಚ್ಚಿನಿಂದ ಕೊಚ್ಚಿ ಸ್ಥಳದಲ್ಲೇ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವೇಗೌಡ (ತಂದೆ) ಮಂಜುನಾಥ್ ಜೊತೆ ಇದ್ದರು.ಮೋಹನ್ ಹಾಗೂ ಮಂಜುನಾಥ್ ಇಬ್ಬರೂ ಅವಿವಾಹಿತರಾಗಿದ್ದರು. ಮೋಹನ್ ಬೇರೆಡೆ ವಾಸಿಸುತ್ತಿದ್ದ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆಸ್ತಿ ಹಂಚಿಕೆಯಲ್ಲಿ ಉಂಟಾದ ವೈಷಮ್ಯವೇ ಈ ಕ್ರೂರ ಹತ್ಯೆಗೆ ಕಾರಣವೆಂಬ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ: ಬರೀ ನೀರು ಕುಡಿಯುವ ವಿಧಾನ ದಿಂದ ನಿಮ್ಮ ವಯಸ್ಸನ್ನು ಸದಾ ಯವ್ವನದ ರೀತಿ ಕಾಣುವಂತೆ ಮಾಡಬಹುದು!
ಘಟನೆಯ ಬಗ್ಗೆ ತಿಳಿದ ತಕ್ಷಣ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಆರೋಪಿಯನ್ನು ಸೆರೆಹಿಡಿಯಲು ಬಲೆ ಬೀಸಲಾಗಿದೆ.
ಈ ಭೀಕರ ಘಟನೆಯಿಂದ ಗ್ರಾಮದಲ್ಲಿ ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
