ಆಲೂರು: ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆ ಸಾರಿಗೆ ಇಲಾಖೆ ನೌಕರನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ವೀರಪ್ಪ (58) ಎಂದು ಗುರುತಿಸಲಾಗಿದೆ. ಕುಟುಂಬ ಸದಸ್ಯರ ಆರೋಪದ ಪ್ರಕಾರ, ದಾಯಾದಿಗಳ ನಡುವೆ ನಡೆಯುತ್ತಿದ್ದ ಆಸ್ತಿ ಕಲಹವೇ ಹತ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ನಿನ್ನೆ ಆಲೂರಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದ ಬಳಿಕ ತಮ್ಮ ಜಮೀನಿನ ಬಳಿ ಬಂದಿದ್ದ ವೀರಪ್ಪ ಅವರನ್ನು ಆರೋಪಿಗಳು ಹಿಂಬಾಲಿಸಿ ಬಂದು ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದರಿಂದ ಮೃತದೇಹ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಘಟನೆಯ ನಂತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ದಾಯಾದಿಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಎಸ್ಪಿ ಶುಭಾನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹತ್ಯೆಯ ನಿಖರ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಕರಣವು ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
